

ಬಳ್ಳಾರಿ, 02 ಜನವರಿ (ಹಿ.ಸ.) :
ಆ್ಯಂಕರ್ : ದಿನನಿತ್ಯ ಬಳಸುವ ರಸ್ತೆಯಲ್ಲಿ ಪ್ರತಿಯೊಬ್ಬರ ಜೀವನ ಅಡಗಿದ್ದು, ಜಾಗರೂಕರಾಗಿ ವಾಹನ ಚಲಾಯಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 37 ನೇ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಸ್ತೆ ಅಪಘಾತಗಳು ಅಪಾಯಕಾರಿಯಾಗಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಲು ಜನವರಿ ಮಾಸಾದ್ಯಂತ ಜಿಲ್ಲೆಯಲ್ಲಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸಾವನ್ನಪ್ಪುವವರ ಸಂಖ್ಯೆ ಮೊದಲನೇ ಮತ್ತು ಎರಡನೇ ಮಹಾಯುದ್ಧದಲ್ಲಿ ಸಾವನ್ನಪ್ಪಿದ್ದ ಸಂಖ್ಯೆಗೆ ಹೋಲಿಸಬಹುದಾಗಿದೆ. 2025ರ ಅಂಕಿ-ಸAಖ್ಯೆ ಪ್ರಕಾರ ದೇಶದಲ್ಲಿ ಸುಮಾರು 4.08 ಲಕ್ಷ ರಸ್ತೆ ಅಪಘಾತ ಘಟನೆಗಳು ಸಂಭವಿಸಿದ್ದು, 1.72 ಲಕ್ಷ ಜನ ತಮ್ಮ ಪ್ರಾಣ ತೆತ್ತಿದ್ದಾರೆ. ವಾಹನ ಚಾಲಕರ ವೃತ್ತಿಯು ಸಹ ಗಡಿ ಕಾಯುವ ಯೋಧರಂತೆ ಕಷ್ಟಕರವಾಗಿದೆ ಎಂದರು.
ಪಾದಚಾರಿಗಳು ಸಹ ಜಾಗ್ರತೆಯಿಂದ ರಸ್ತೆ ಸಂಚಾರ ನಿಮಯಗಳನ್ನು ಪಾಲಿಸಬೇಕಿದೆ. ಅವಘಡ ಯಾವ ರೀತಿಯಲ್ಲಾದರೂ ಸಂಭವಿಸಬಹುದಾಗಿದೆ. ಹಾಗಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್, ಶಿಕ್ಷಣ ಇಲಾಖೆಗಳನ್ನೊಳಗೊಂಡ0ತೆ ರಸ್ತೆ ಸುರಕ್ಷತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಮೆಗಾ ಡ್ರೆöÊವ್ ಆಯೋಜಿಸಿ :
ವಾಹನಗಳಿಗೆ ವಿಮೆ ಬಹು ಮುಖ್ಯವಾಗಿದ್ದು, ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ, ವಿಮೆ ಮೂಲಕ ನೆರವು ಪಡೆಯಬಹುದಾಗಿದೆ. ಇದರಿಂದ ಅವರ ಕುಟುಂಬದ ಅವಲಂಬಿತರಿಗೆ ಸಹಾಯವಾಗಲಿದೆ. ಹಾಗಾಗಿ ಸಾರಿಗೆ ಇಲಾಖೆಯು ಹಳ್ಳಿಗಳಲ್ಲಿರುವ ವಾಹನಗಳ ಮಾಹಿತಿ ಸಂಗ್ರಹಿಸಿ ಅವರಿಗೆ ಜಾಗೃತಿ ಮೂಡಿಸುವ ಮೂಲಕ ವಿಮೆ ವಿತರಣೆ ಮಾಡಲು ಮೆಗಾ ಡ್ರೆöÊವ್ ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.
18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡಿದಲ್ಲಿ ಮಕ್ಕಳ ಪೋಷಕರ ವಿರುದ್ಧ ಪ್ರಕರಣ ಮತ್ತು 25,000 ಸಾವಿರ ದಂಡ ವಿಧಿಸಲಾಗುವುದು ಮತ್ತು ಚಾಲನಾ ಪರವಾನಿಗೆ ಇಲ್ಲದೇ ವಾಹನ ಚಲಾಯಿಸುವಂತಿಲ್ಲ. ಈ ಕುರಿತು ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧೀಕ್ಷಕ ಅಡಿವೇಶ ಗೌಡ ಅವರು ಮಾತನಾಡಿ, ಸಾರಿಗೆಯು ದೇಶದ ಆರ್ಥಿಕ ಅಭಿವೃದ್ಧಿಗೆ ಕೀಲಿ ಕೈ. ಯಾವ ದೇಶ ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿರುತ್ತದೆಯೋ ಆ ದೇಶ ಅಭಿವೃದ್ಧಿ ಹೊಂದಲಿದೆ. ಅದರ ಜೊತೆಗೆ ಸುರಕ್ಷತೆಯು ಅಷ್ಟೇ ಮುಖ್ಯವಾಗಿರುತ್ತದೆ. ವಾಯು, ಜಲ ಸಾರಿಗೆಗಳಂತೆ ಭೂ ಸಾರಿಗೆಯಲ್ಲಿ ರಸ್ತೆ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ನಿಮಯ, ಸಂಚಾರಿ ಚಿಹ್ನೆಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಿ.ಶಫೀವುಲ್ಲಾ ಅವರು ಮಾತನಾಡಿ, ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಬೆಲ್ಟ್ ಕಟ್ಟಿಕೊಳ್ಳಬೇಕು. ಚಾಲನೆ ವೇಳೆ ಮೊಬೈಲ್ ಫೋನ್ ಬಳಸಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂದು ತಿಳಿಸಿದರು.
ಕೆಲವು ಮುಖ್ಯ ರಸ್ತೆ ಸಂಚಾರ ನಿಯಮಗಳನ್ನು ಕೈ ಸನ್ನೆಯ ಮೂಲಕ ಸಾರ್ವಜನಿಕರಿಗೆ ತಿಳಿಸಿದರು.
ಬಳ್ಳಾರಿ ಪ್ರಭಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಿಜಾಮುದ್ದೀನ್ ಶರೀಫ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ದುರಸ್ಥಿ ವಾಹನಗಳನ್ನು ಬಳಸಬಾರದು. ಇದರಿಂದ ವಾಯುಮಾಲಿನ್ಯ ತಡೆಗಟ್ಟಬಹುದಾಗಿದೆ. ನಿಯಮಿತವಾಗಿ ವಾಹನಗಳ ತಪಾಸಣೆ ಕೈಗೊಂಡು ಬಳಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕುರಿತ ಮಾಹಿತಿ ಭಿತ್ತಿಪತ್ರ ಗಣ್ಯರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ವಿಭಾಗದ ಅಧೀಕ್ಷಕ ಗೋವಿಂದಪ್ಪ, ಹಿರಿಯ ಮೋಟಾರು ವಾಹನ ನಿರೀಕ್ಷಕ ಬಸವರಾಜ ಬೀರದಾರ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್