
ಕಲಿಯಾಬೋರ್, 18 ಜನವರಿ (ಹಿ.ಸ.) :
ಆ್ಯಂಕರ್ : ಎರಡು ದಿನಗಳ ಅಸ್ಸಾಂ ಪ್ರವಾಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಾಗಾಂವ್ ಜಿಲ್ಲೆಯ ಕಲಿಯಾಬೋರ್‌ನಲ್ಲಿ ₹6,950 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಮಹತ್ವಾಕಾಂಕ್ಷಿ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಅವರು ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆ ರಾಷ್ಟ್ರೀಯ ಹೆದ್ದಾರಿ–715 ರ ಕಲಿಯಾಬೋರ್–ನುಮಲಿಗಢ ವಿಭಾಗದ ನಾಲ್ಕು ಪಥಗಳ ವಿಸ್ತರಣೆಯನ್ನು ಒಳಗೊಂಡಿದೆ. ಪರಿಸರ ಸಂರಕ್ಷಣೆಯನ್ನು ಕೇಂದ್ರಬಿಂದುಗೊಳಿಸಿ ವಿನ್ಯಾಸಗೊಳಿಸಲಾದ ಈ ಯೋಜನೆಯು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಜೀವವೈವಿಧ್ಯತೆಯ ರಕ್ಷಣೆ ಜೊತೆಗೆ ಪ್ರಾದೇಶಿಕ ರಸ್ತೆ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯಡಿ ಸುಮಾರು 86 ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿ ನಡೆಯಲಿದ್ದು, ಅದರಲ್ಲಿ 35 ಕಿಲೋಮೀಟರ್ ಉದ್ದದ ಎತ್ತರದ ವನ್ಯಜೀವಿ ಕಾರಿಡಾರ್ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಮೂಲಕ ಹಾದುಹೋಗಲಿದೆ. ವಿಶೇಷವಾಗಿ ಮಳೆಗಾಲದಲ್ಲಿ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕೆ ಇದು ಸಹಕಾರಿಯಾಗಲಿದೆ. ಜೊತೆಗೆ 21 ಕಿಲೋಮೀಟರ್ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗಲಿದ್ದು, ಅಸ್ತಿತ್ವದಲ್ಲಿರುವ NH-715 ರ ಸುಮಾರು 30 ಕಿಲೋಮೀಟರ್ ಭಾಗವನ್ನು ಎರಡು ಪಥಗಳಿಂದ ನಾಲ್ಕು ಪಥಗಳಿಗೆ ವಿಸ್ತರಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಗುವಾಹಟಿ (ಕಾಮಾಖ್ಯ)–ರೋಹ್ತಕ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಹಾಗೂ ದಿಬ್ರುಗಢ–ಲಕ್ನೋ (ಗೋಮ್ತಿ ನಗರ) ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ಈ ಹೊಸ ರೈಲು ಸೇವೆಗಳು ಈಶಾನ್ಯ ಮತ್ತು ಉತ್ತರ ಭಾರತದ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣ ಸೌಲಭ್ಯ ಒದಗಿಸಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa