
ಬೆಂಗಳೂರು, 16 ಜನವರಿ (ಹಿ.ಸ.) :
ಆ್ಯಂಕರ್ : ಪ್ರತಿಯೊಂದು ಮತವೂ ಪವಿತ್ರವಾಗಿದ್ದು, ಅದರ ರಕ್ಷಣೆಗಳು ಪರಿಣಾಮಕಾರಿಯಾಗಿ ಜಾರಿಯಾದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳು, ಸ್ಯಾನಿಟೈಸರ್, ಅಸಿಟೋನ್ ಮತ್ತು ಇತರ ರಾಸಾಯನಿಕಗಳಿಂದ ‘ಅಳಿಸಲಾಗದ’ ಶಾಯಿಯನ್ನು ಸುಲಭವಾಗಿ ಅಳಿಸಬಹುದೆಂಬುದನ್ನು ತೋರಿಸುತ್ತಿವೆ. ಈ ವಿದ್ಯಮಾನಗಳು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದ್ದು, ಮಹಾರಾಷ್ಟ್ರದ ಗಡಿಯನ್ನು ಮೀರಿ ದೇಶದಾದ್ಯಂತ ಚರ್ಚೆಗೆ ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ.
ಇದು ಕೇವಲ ಪ್ರತ್ಯೇಕ ದೋಷವಲ್ಲ ಮತ ಕಳ್ಳತನ ಕುರಿತಾಗಿ ಉಂಟಾಗುತ್ತಿರುವ ದೊಡ್ಡ ಕಥಾನಕದ ಮತ್ತೊಂದು ಆತಂಕಕಾರಿ ಅಧ್ಯಾಯವಾಗಿದೆ. ನೈಜ ಪ್ರಶ್ನೆಗಳಿಗೆ ನಿರಾಕರಣೆ, ವಿಷಯಾಂತರ ಅಥವಾ ಮೌನದ ಮೂಲಕ ಪ್ರತಿಕ್ರಿಯಿಸುವ ಪ್ರವೃತ್ತಿ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೂಲಭೂತ ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುವುದು ಮತ್ತು ನಾಗರಿಕರ ಕಳವಳಗಳನ್ನು ತಳ್ಳಿಹಾಕುವುದು ಪ್ರಜಾಪ್ರಭುತ್ವವನ್ನು ರಕ್ಷಿಸುವುದಲ್ಲ, ಬದಲಿಗೆ ಅದಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ಚುನಾವಣಾ ಆಯೋಗವು ತಕ್ಷಣವೇ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಅಗತ್ಯ ಸರಿಪಡಿಸುವ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa