
ಟ್ಯಾಂಜಿಯರ್ಸ್, 15 ಜನವರಿ (ಹಿ.ಸ.) :
ಆ್ಯಂಕರ್ : ಆಫ್ರಿಕಾ ಕಪ್ ಆಫ್ ನೇಷನ್ಸ್ 2025ರ ಸೆಮಿಫೈನಲ್ ಪಂದ್ಯದಲ್ಲಿ ಸ್ಯಾಡಿಯೊ ಮಾನೆ ಅವರ 78ನೇ ನಿಮಿಷದ ನಿರ್ಣಾಯಕ ಗೋಲಿನ ನೆರವಿನಿಂದ ಸೆನೆಗಲ್, ಈಜಿಪ್ಟ್ ಅನ್ನು 1–0 ಗೋಲುಗಳಿಂದ ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಜಯದೊಂದಿಗೆ, ಸೆನೆಗಲ್ ನಾಯಕ ಮಾನೆ ತಮ್ಮ ಮಾಜಿ ಲಿವರ್‌ಪೂಲ್ ಸಹ ಆಟಗಾರ ಹಾಗೂ ಈಜಿಪ್ಟ್ ನಾಯಕ ಮೊಹಮ್ಮದ್ ಸಲಾಹ್ ವಿರುದ್ಧ ಮತ್ತೊಮ್ಮೆ ಮೇಲುಗೈ ಸಾಧಿಸಿದರು.
ಪಂದ್ಯದ ನಂತರ ಮಾತನಾಡಿದ 33 ವರ್ಷದ ಮಾನೆ, ಇದು ತಮ್ಮ ಕೊನೆಯ ಆಫಕನ್ ಟೂರ್ನಮೆಂಟ್ ಆಗಿರಬಹುದು ಎಂದು ತಿಳಿಸಿದರು.
“ನನ್ನ ಕೊನೆಯ ಆಫ್ರಿಕಾ ಕಪ್‌ನಲ್ಲಿ ಆಡುತ್ತಿರುವುದು ನನಗೆ ಅಪಾರ ಸಂತೋಷ. ಫೈನಲ್ ಗೆದ್ದು ಟ್ರೋಫಿಯನ್ನು ಡಾಕರ್‌ಗೆ ಮರಳಿ ತರುವ ಕನಸು ನನಗಿದೆ” ಎಂದರು.
ಮಾಜಿ ಚಾಂಪಿಯನ್ ಸೆನೆಗಲ್ ತಂಡವು ಎಚ್ಚರಿಕೆಯ ಆಟವಾಡಿದ ಈಜಿಪ್ಟ್ ವಿರುದ್ಧ ಚೆಂಡಿನ ಹಿಡಿತವನ್ನು ಕಾಪಾಡಿಕೊಂಡು ಪಂದ್ಯವನ್ನು ನಿಯಂತ್ರಿಸಿತು. ಈಗ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಆತಿಥೇಯ ಮೊರಾಕೊವನ್ನು ಎದುರಿಸಲು ಸೆನೆಗಲ್ ಸಜ್ಜಾಗಿದೆ.
ಈ ಫಲಿತಾಂಶದೊಂದಿಗೆ, ಈಜಿಪ್ಟ್ ವಿರುದ್ಧ ಸೆನೆಗಲ್ ತನ್ನ ಇತ್ತೀಚಿನ ಪ್ರಾಬಲ್ಯವನ್ನು ಮುಂದುವರೆಸಿದೆ. 2022ರ ಆಫಕನ್ ಫೈನಲ್ ಹಾಗೂ 2022ರ FIFA ವಿಶ್ವಕಪ್ ಪ್ಲೇಆಫ್‌ಗಳಲ್ಲಿ ಕೂಡ ‘ಟೆರಂಗ ಲಯನ್ಸ್’ ಈಜಿಪ್ಟ್ ಅನ್ನು ಪೆನಾಲ್ಟಿ ಶೂಟೌಟ್‌ಗಳಲ್ಲಿ ಮಣಿಸಿತ್ತು.
ಇದು ಸೆನೆಗಲ್‌ನ ನಾಲ್ಕನೇ ಆಫಕನ್ ಫೈನಲ್ ಪ್ರವೇಶ. 2002ರಲ್ಲಿ ಕ್ಯಾಮರೂನ್ ವಿರುದ್ಧ ಮತ್ತು 2019ರಲ್ಲಿ ಅಲ್ಜೀರಿಯಾ ವಿರುದ್ಧ ಸೆನೆಗಲ್ ಫೈನಲ್‌ನಲ್ಲಿ ಸೋಲನುಭವಿಸಿತ್ತು. ಆದರೆ 2021ರ ಆವೃತ್ತಿಯಲ್ಲಿ (2022ರಲ್ಲಿ ನಡೆದ) ಈಜಿಪ್ಟ್ ಅನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
ಈಜಿಪ್ಟ್ ನಾಯಕ ಮೊಹಮ್ಮದ್ ಸಲಾಹ್ ಪಂದ್ಯದುದ್ದಕ್ಕೂ ಸೆನೆಗಲ್‌ನ ಬಲಿಷ್ಠ ರಕ್ಷಣೆಯಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಲ್ಪಟ್ಟರು. ಇದು ಸಲಾಹ್ ಪಾಲಿಗೆ ಐದನೇ ಆಫಕನ್ ಟೂರ್ನಮೆಂಟ್ ಆಗಿದ್ದು, ಅವರು ಇದುವರೆಗೆ ಎರಡು ಬಾರಿ ರನ್ನರ್-ಅಪ್ ಆಗಿ ಪ್ರಶಸ್ತಿಗೆ ಹತ್ತಿರವಾಗಿದ್ದರು.
“ನಾವು ಆರಂಭದಿಂದ ಅಂತ್ಯವರೆಗೆ ಒಂದು ತಂಡವಾಗಿ ಆಡಿದೆವು. ಅನಗತ್ಯ ತಪ್ಪುಗಳು ಮತ್ತು ಫೌಲ್‌ಗಳನ್ನು ತಪ್ಪಿಸಲು ಗಮನಹರಿಸಿದ್ದೆವು. ಆಟದ ಮೇಲೆ ನಾವು ಹಿಡಿತ ಕಾಯ್ದುಕೊಂಡಿದ್ದೇವೆ; ಈ ಗೆಲುವಿಗೆ ನಾವು ಅರ್ಹರು” ಎಂದು ಮಾನೆ ಹೇಳಿದರು.
“ನನಗೆ ಮುಖ್ಯವಾದುದು ಸೆನೆಗಲ್ ಗೆಲ್ಲುವುದು. ದೇಶಕ್ಕಾಗಿ ಪ್ರತಿದಿನ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಶ್ರಮಿಸುತ್ತೇನೆ. ಆಫ್ರಿಕಾ ಕಪ್ ಆಫ್ ನೇಷನ್ಸ್ ವಿಶ್ವದ ಅತ್ಯಂತ ಕಠಿಣ ಟೂರ್ನಮೆಂಟ್‌ಗಳಲ್ಲಿ ಒಂದಾಗಿದೆ, ಏಕೆಂದರೆ ಬಹುತೇಕ ಎಲ್ಲ ತಂಡಗಳೂ ಸಮಾನ ಶಕ್ತಿಯಲ್ಲಿವೆ” ಎಂದು ಅವರು ಹೇಳಿದರು.
ಪಂದ್ಯದ ವೇಳೆ ಎರಡೂ ತಂಡಗಳ ನಡುವೆ ಹಲವು ಬಾರಿ ಬಿಸಿ ವಾಗ್ವಾದಗಳು ನಡೆದವು. 17ನೇ ನಿಮಿಷದಲ್ಲಿ ಸೆನೆಗಲ್‌ನ ಅನುಭವಿ ಡಿಫೆಂಡರ್ ಕಾಲಿಡೌ ಕೌಲಿಬಾಲಿ, ಈಜಿಪ್ಟ್ ಸ್ಟ್ರೈಕರ್ ಒಮರ್ ಮರ್ಮೌಶ್ ಮೇಲೆ ಫೌಲ್ ಮಾಡಿದ ಕಾರಣ ಹಳದಿ ಕಾರ್ಡ್ ಪಡೆದರು. ಇದು ಸತತ ಪಂದ್ಯಗಳಲ್ಲಿ ಅವರ ಎರಡನೇ ಹಳದಿ ಕಾರ್ಡ್ ಆಗಿದ್ದರಿಂದ, ರಬಾತ್‌ನಲ್ಲಿ ನಡೆಯುವ ಫೈನಲ್ ಪಂದ್ಯದಿಂದ ಅವರು ಹೊರಗುಳಿದರು.
ಮೊದಲಾರ್ಧದಲ್ಲಿ ಸೆನೆಗಲ್ ಆಕ್ರಮಣಕಾರಿ ಆಟವಾಡಿದರೂ, ಈಜಿಪ್ಟ್‌ನ 37 ವರ್ಷದ ಗೋಲ್‌ಕೀಪರ್ ಮೊಹಮ್ಮದ್ ಎಲ್-ಶೆನಾವಿಗೆ ಗಂಭೀರ ಸವಾಲು ನೀಡಲು ಸಾಧ್ಯವಾಗಲಿಲ್ಲ. ಅರ್ಧಾವಧಿಗೆ ಮುನ್ನ, ಎರಡೂ ತಂಡಗಳ ಕೋಚ್‌ಗಳು ಮತ್ತು ಬೆಂಚ್ ಆಟಗಾರರ ನಡುವೆ ಮಾತಿನ ಚಕಮಕಿ ಹಾಗೂ ಸಣ್ಣ ಜಗಳ ಉಂಟಾದರೂ, ರೆಫರಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು.
ದ್ವಿತೀಯಾರ್ಧದಲ್ಲಿಯೂ ಪಂದ್ಯದ ಸ್ವರೂಪ ಬಹುತೇಕ ಅದೆ ರೀತಿಯೇ ಮುಂದುವರಿಯಿತು. ಈಜಿಪ್ಟ್ ರಕ್ಷಣಾತ್ಮಕ ತಂತ್ರಕ್ಕೆ ಅಂಟಿಕೊಂಡರೆ, ಸೆನೆಗಲ್ ಚೆಂಡಿನ ನಿಯಂತ್ರಣವನ್ನು ಮುಂದುವರೆಸಿತು. ಅಂತಿಮವಾಗಿ 78ನೇ ನಿಮಿಷದಲ್ಲಿ ಸೆನೆಗಲ್ ಒತ್ತಡ ಫಲ ನೀಡಿತು. ಕಮಾರಾ ಅವರ ದೂರದ ಹೊಡೆತ ವಿಚಲನಗೊಂಡು ಮಾನೆಗೆ ತಲುಪಿತು; ಅವರ ಕಡಿಮೆ ಶಾಟ್ ಎಲ್-ಶೆನಾವಿಯನ್ನು ಮೀರಿಸಿ ನೆಟ್‌ಗೆ ನುಗ್ಗಿತು.
ಇದೀಗ ಸೆನೆಗಲ್ ತಂಡದ ಗಮನ ಸಂಪೂರ್ಣವಾಗಿ ಫೈನಲ್ ಮೇಲಿದ್ದು, ಮತ್ತೊಂದು ಇತಿಹಾಸ ನಿರ್ಮಿಸುವ ಕನಸಿನೊಂದಿಗೆ ಮೈದಾನಕ್ಕೆ ಇಳಿಯಲು ಸಿದ್ಧವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa