
ಬೆಂಗಳೂರು, 15 ಜನವರಿ (ಹಿ.ಸ.) :
ಆ್ಯಂಕರ್ : ವಿಬಿ–ಜಿ ರಾಮ್ ಜಿ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂಬ ನೆಪವೊಡ್ಡಿಕೊಂಡು ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ನಡೆಸಲು ಮುಂದಾಗಿರುವುದು ಶುದ್ಧ ನಾಟಕ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಟುವಾಗಿ ಟೀಕಿಸಿದ್ದಾರೆ.
ಮಹಾತ್ಮ ಗಾಂಧೀಜಿ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್, ವಾಸ್ತವದಲ್ಲಿ ಗಾಂಧೀಜಿ ತತ್ವಗಳು ಮತ್ತು ಆದರ್ಶಗಳಿಗೆ ಸಂಪೂರ್ಣ ವಿರೋಧಿ ನಡೆ ತೋರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗಾಂಧೀಜಿಯವರಿಗೆ ಗೋವುಗಳ ಬಗ್ಗೆ ಭಕ್ತಿ ಮತ್ತು ಗೌರವವಿತ್ತು. ಆದರೆ ಬಿಜೆಪಿ ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೊಳಿಸಿದಾಗ ಕಾಂಗ್ರೆಸ್ ಅದಕ್ಕೆ ವಿರೋಧ ವ್ಯಕ್ತಪಡಿಸಿತು. ಗಾಂಧೀಜಿ ಭಗವದ್ಗೀತೆಯನ್ನು ಜೀವನದ ಮಾರ್ಗದರ್ಶಕ ಗ್ರಂಥವೆಂದು ಪರಿಗಣಿಸಿದ್ದರೂ, ಅದನ್ನು ಪಠ್ಯಕ್ರಮದಲ್ಲಿ ಸೇರಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಹೇಳಿದರು.
ಗಾಂಧೀಜಿ ‘ರಘುಪತಿ ರಾಘವ ರಾಜಾರಾಮ್’ ಎಂದು ರಾಮನಾಮ ಸ್ಮರಣೆ ಮಾಡಿದ್ದರೆ, ಕಾಂಗ್ರೆಸ್ ಅಯೋಧ್ಯೆಯ ರಾಮಮಂದಿರ ನಿರ್ಮಾಣವನ್ನೇ ವಿರೋಧಿಸಿತು. ಗಾಂಧೀಜಿ ಮದ್ಯಪಾನ ನಿಷೇಧಕ್ಕಾಗಿ ಹೋರಾಟ ನಡೆಸಿದ್ದರೆ, ಇಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದ ರಸ್ತೆ ರಸ್ತೆಗೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡುತ್ತಿದೆ ಎಂದು ಅಶೋಕ್ ಕಿಡಿಕಾರಿದರು.
ಇಂತಹ ದ್ವಂದ್ವ ನೀತಿಯನ್ನು ಅನುಸರಿಸುವ ಕಾಂಗ್ರೆಸ್‌ಗೆ ‘ವಿಕಸಿತ ಭಾರತ’ ಎಂಬ ಕನಸಿನ ಮೇಲೂ ಏಕೆ ಕೋಪ ಎಂಬುದು ರಾಜ್ಯದ ಜನರಿಗೆ ಸ್ಪಷ್ಟವಾಗಿದೆ. ಗಾಂಧೀಜಿ ಹೆಸರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು, ಅವರ ಆದರ್ಶಗಳನ್ನು ಕಾಲಿನಡಿಗೆ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa