
ಬೆಂಗಳೂರು, 15 ಜನವರಿ (ಹಿ.ಸ.) :
ಆ್ಯಂಕರ್ : ಬಿಜೆಪಿಯಿಂದ ನಾವು ಸಂಸ್ಕೃತಿ ಕಲಿಯಬೇಕಾ? ಸರ್ವ ಧರ್ಮ ಗ್ರಂಥಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಸಂಸ್ಕೃತಿ ಎಂಬುದೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪೌರಾಯುಕ್ತೆಗೆ ಸಂಬಂಧಿಸಿದಂತೆ ರಾಜೀವ್ ಗೌಡ ದಮ್ಕಿ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜೀವ್ ಗೌಡರಾಗಲಿ ಅಥವಾ ಯಾರೇ ಆಗಲಿ—ಕಾನೂನಿಗಿಂತ ದೊಡ್ಡವರಲ್ಲ. ಅವಾಚ್ಯ ಶಬ್ದಗಳಲ್ಲಿ ಮಾತನಾಡುವುದು ಹಾಗೂ ಅದನ್ನು ಸಮರ್ಥಿಸಿಕೊಳ್ಳುವುದು ತಪ್ಪು. ಸಂವಿಧಾನ ಮತ್ತು ಕಾನೂನಿನಲ್ಲಿ ಯಾರನ್ನಾದರೂ ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷರು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ,
ಬಿಜೆಪಿಯಿಂದ ನಾವು ಸಂಸ್ಕೃತಿ ಕಲಿಯಬೇಕೇ? ಮುನಿರತ್ನ, ಸಿಟಿ ರವಿ ಅವರು ಕೌನ್ಸಿಲ್‌ನಲ್ಲಿ ಏನು ಮಾತನಾಡಿದ್ದಾರೆ ಅನ್ನೋದನ್ನ ಜನರಿಗೆ ಗೊತ್ತಿದೆ. ಪ್ರತಿ ಪಕ್ಷದ ಮೇಲ್ಮನೆ ನಾಯಕರು ಚಿತಾಪುರದಲ್ಲಿ ನನಗೆ ‘ನಾಯಿ’ ಅಂತ ಹೇಳಿ ಹೋಗಿದ್ದಾರೆ. ಇವರಿಂದ ಸಂಸ್ಕೃತಿ ಕಲಿಬೇಕಾ? ಎಂದು ಪ್ರಶ್ನಿಸಿದರು.
ಸರ್ವ ಧರ್ಮ ಗ್ರಂಥಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಒಂದು ನಯಾಪೈಸೆಯಷ್ಟು ಸಂಸ್ಕೃತಿಯೂ ಇಲ್ಲ ಎಂದು ಕಿಡಿಕಾರಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa