
ಬೆಂಗಳೂರು, 15 ಜನವರಿ (ಹಿ.ಸ.) :
ಆ್ಯಂಕರ್ : ರೌಡಿಗಳ ಅಡ್ಡೆಯಾಗಿಯೇ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವನ್ನು ನೆಪವನ್ನಾಗಿಸಿಕೊಂಡು ಬಿಜೆಪಿ ನಾಯಕರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಕಾಂಗ್ರೆಸ್ ನಾಯಕರು, ಇದೀಗ ಶಿಡ್ಲಘಟ್ಟದಲ್ಲಿ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಕಾಂಗ್ರೆಸ್ ಪಕ್ಷದ ನೈಜ ಮುಖವನ್ನೇ ಬಯಲು ಮಾಡಿದೆ ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಪಕ್ಷದ ಬೀದಿ ರೌಡಿಗಳ ಅಟ್ಟಹಾಸದಿಂದ ರಾಜ್ಯದ ಜನರು ಆತಂಕದಲ್ಲಿದ್ದಾರೆ. ಬಳ್ಳಾರಿ ಪ್ರಕರಣದಲ್ಲಿ ಹತ್ಯೆ ಸಂಚು ರೂಪಿಸಿದ ಕಾಂಗ್ರೆಸ್ ಶಾಸಕನನ್ನು ಸಿದ್ದರಾಮಯ್ಯ ಸರ್ಕಾರವೇ ಮುಂದೆ ನಿಂತು ರಕ್ಷಣೆ ಮಾಡಿದ ಪರಿಣಾಮ, ಸಮಾಜಘಾತುಕ ಚಟುವಟಿಕೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತಷ್ಟು ಧೈರ್ಯ ಹಾಗೂ ಪ್ರೇರಣೆ ದೊರೆತಂತಾಗಿದೆ ಎಂದು ಆರೋಪಿಸಿದೆ.
ಸಚಿವರು ಧಮ್ಕಿ ಹಾಕಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ತಕ್ಷಣ ಮುಂದಾಗುವ ಸರ್ಕಾರ, ತನ್ನದೇ ಪಕ್ಷದ ಗೂಂಡಾ ಕಾರ್ಯಕರ್ತರು ನಡೆಸುತ್ತಿರುವ ಹಲ್ಲೆ, ನಿಂದನೆ ಮತ್ತು ಕಿರುಕುಳ ಪ್ರಕರಣಗಳ ಬಗ್ಗೆ ಜಾಣ ಮೌನ ತಾಳುತ್ತಿರುವುದು ಅತೀ ಖಂಡನೀಯವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಮುಖ್ಯಮಂತ್ರಿಗಳೇ, ಕಾಂಗ್ರೆಸ್ ಪಕ್ಷದ ರಾಜೀವ್ ಗೌಡ ಎಂಬ ಪುಡಿ ರೌಡಿಯನ್ನು ಪಕ್ಷದಿಂದ ಉಚ್ಛಾಟಿಸುವ ಧೈರ್ಯ ನಿಮ್ಮ ಸರ್ಕಾರಕ್ಕೆ ಇದೆಯೇ? ಅಥವಾ ಎಂದಿನಂತೆ ತಪ್ಪಿತಸ್ಥನನ್ನು ರಕ್ಷಿಸಿ, ಕರ್ತವ್ಯನಿಷ್ಠ ಅಧಿಕಾರಿಯನ್ನೇ ವರ್ಗಾವಣೆ ಮಾಡುವ ಮೂಲಕ ರೌಡಿಗಳಿಗೆ ಬೆಂಬಲ ನೀಡಲಿದ್ದೀರಾ ಎಂಬುದಕ್ಕೆ ರಾಜ್ಯದ ಜನರು ಉತ್ತರ ನಿರೀಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa