
ತುಮಕೂರು, 15 ಜನವರಿ (ಹಿ.ಸ.) :
ಆ್ಯಂಕರ್ : ತುಮಕೂರು ನಗರದ ಎನ್‌ಸಿಸಿ 4ನೇ ಬೆಟಾಲಿಯನ್‌ನಲ್ಲಿ ಭಾರತದ ಮೊದಲ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ಸ್ಮರಣಾರ್ಥವಾಗಿ ಆಚರಿಸಲಾದ ರಾಷ್ಟ್ರೀಯ ಸೇನಾ ದಿನ, ಮಾಜಿ ಯೋಧರ ದಿನ ಹಾಗೂ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಇಂದು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ಭೂಮಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ನಿವೃತ್ತ ಯೋಧರ ಸಮಸ್ಯೆಗಳು ಹಾಗೂ ಅವಶ್ಯಕತೆಗಳ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಸಭೆ ಕರೆಯಲಾಗುವುದು. ಅವರ ಅಭಿಪ್ರಾಯಗಳನ್ನು ಪಡೆದು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ನಿವೃತ್ತಿಯ ನಂತರ ಕೃಷಿ ಮಾಡಲು ಆಸಕ್ತಿ ಹೊಂದಿರುವ ಸೈನಿಕರಿಗೆ ಭೂಮಿ ನೀಡುವುದು, ಉದ್ಯಮ ಆರಂಭಿಸಲು ಬಯಸುವವರಿಗೆ ಅಗತ್ಯ ಸಹಾಯ ಒದಗಿಸುವ ಉದ್ದೇಶದಿಂದ ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿರುವ ನಿವೃತ್ತ ಯೋಧರನ್ನು ಮತ್ತೊಮ್ಮೆ ಭೇಟಿ ಮಾಡಿ, ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ, 4ನೇ ಕರ್ನಾಟಕ ಬೆಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ಅವಿನಾಶ್, ಸುಬೇದಾರ್ ಮೇಜರ್ ದಿನೇಶ್ ಸಿಂಗ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬೊಮ್ಮಲಿಂಗಯ್ಯ, ವಿ.ಡಿ. ನಾಗರಾಜು ಹಾಗೂ ಎನ್‌ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ರಾಮಲಿಂಗಾರೆಡ್ಡಿ, ಕ್ಯಾಪ್ಟನ್ ಪ್ರದೀಪ್ ಕುಮಾರ್, ಲೆಫ್ಟಿನೆಂಟ್ ಕವಿತಾ, ಲೆಫ್ಟಿನೆಂಟ್ ಶೃತಿ, ಲೆಫ್ಟಿನೆಂಟ್ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa