
ಬೆಂಗಳೂರು, 13 ಜನವರಿ (ಹಿ.ಸ.);
ಆ್ಯಂಕರ್:ಉತ್ತರ ಕರ್ನಾಟಕದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಾದರಿಯ ಸಂಸ್ಥೆಯನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಬೇಕೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದರು.
ಕೇಂದ್ರ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ AIISHನ 60ನೇ ಕೌನ್ಸಿಲ್ ಸಭೆಯಲ್ಲಿ (ವರ್ಚುವಲ್) ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವ ವಾಕ್ ಮತ್ತು ಶ್ರವಣ ಆರೋಗ್ಯ ಸಂಬಂಧಿತ ಹಲವು ಮಹತ್ವದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದರು.
ಪ್ರಸ್ತುತ ಸೇವೆಯಲ್ಲಿರುವ ಆರೋಗ್ಯ ಸಿಬ್ಬಂದಿಗಾಗಿ 3 ರಿಂದ 6 ತಿಂಗಳ ಅವಧಿಯ ಅಲ್ಪಾವಧಿ ತರಬೇತಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ಪರಿಚಯಿಸಲು ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ಕೋರ್ಸ್‌ಗಳನ್ನು AIISH ಮೈಸೂರು ಅಥವಾ ಜಿಲ್ಲಾ ಮಟ್ಟದ ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ AIISHನ ಶೈಕ್ಷಣಿಕ ಸಹಯೋಗದೊಂದಿಗೆ ನಡೆಸಬಹುದು. ಮಕ್ಕಳಲ್ಲಿ ಸ್ಕ್ರೀನಿಂಗ್, ಆರಂಭಿಕ ಗುರುತಿಸುವಿಕೆ, ಮಾತು ಮತ್ತು ಶ್ರವಣ ಸಮಸ್ಯೆಗಳ ಪತ್ತೆ ಹಾಗೂ ಶ್ರವಣೇಂದ್ರಿಯ ಚಿಕಿತ್ಸೆ ಕುರಿತ ತರಬೇತಿಗೆ ಒತ್ತು ನೀಡಬೇಕು ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಯ್ದ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳ ಮೂಲಕ ಔಟ್‌ರೀಚ್ ಅಥವಾ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಸ್ಕ್ರೀನಿಂಗ್, ಫಾಲೋ-ಅಪ್ ಹಾಗೂ ಚಿಕಿತ್ಸಾ ಸೇವೆಗಳನ್ನು ಸುಗಮವಾಗಿ ಒದಗಿಸಬಹುದು ಎಂದು ತಿಳಿಸಿದರು.
ಈ ಕೇಂದ್ರಗಳು ಮೈಸೂರು AIISHಗೆ ಸಂಪರ್ಕ ಹೊಂದಿದ ಸ್ಥಳೀಯ ತರಬೇತಿ ಮತ್ತು ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ರಾಜ್ಯ ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮವನ್ನು ಇನ್ನಷ್ಟು ಬಲಪಡಿಸಲು AIISH ಮೈಸೂರಿನಿಂದ ತಾಂತ್ರಿಕ ಮಾರ್ಗದರ್ಶನ ಅಗತ್ಯವಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಈ ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ 50:50 ವೆಚ್ಚ ಹಂಚಿಕೆಯ ಮೂಲಕ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಲು ಉತ್ತರ ಕರ್ನಾಟಕದಲ್ಲಿ AIISH-ತರಹದ ಸಂಸ್ಥೆಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.
ಈ ಸಂಸ್ಥೆಗಾಗಿ ಭೂಮಿ ಮತ್ತು ಮೂಲಭೂತ ಮೂಲಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಲು ಸಿದ್ಧವಿದ್ದು, ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಘಟಕಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಅಗತ್ಯವಿದೆ ಎಂದರು.
ವಾಕ್ ಮತ್ತು ಶ್ರವಣ ವಿಜ್ಞಾನ ಕ್ಷೇತ್ರದಲ್ಲಿ ತರಬೇತಿ, ಸೇವಾ ವಿತರಣೆ ಹಾಗೂ ಸಂಶೋಧನೆಗೆ ಈ ಸಂಸ್ಥೆ ಉಪಯುಕ್ತವಾಗಲಿದೆ. ಇದರಿಂದ ಮೈಸೂರಿನ ಕೇಂದ್ರದ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಉತ್ತರ ಕರ್ನಾಟಕದ ಜನರು ಚಿಕಿತ್ಸೆಗಾಗಿ ದೂರ ಪ್ರಯಾಣ ಮಾಡುವ ಸಮಸ್ಯೆಯೂ ತಪ್ಪಲಿದೆ ಎಂದು ಹೇಳಿದರು.
ಈ ಎಲ್ಲ ಪ್ರಸ್ತಾವನೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ರಾಜ್ಯ ಸರ್ಕಾರದಿಂದ ಸಮಗ್ರ ಪ್ರಸ್ತಾವನೆ ಕಳುಹಿಸಿಕೊಡುವಂತೆ ಸೂಚಿಸಿ, ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa