
ಗದಗ, 13 ಜನವರಿ (ಹಿ.ಸ.)
ಆ್ಯಂಕರ್:-
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆ ಆಗಿರುವ ನಿಧಿಯಲ್ಲಿ 466 ಗ್ರಾಂ ಚಿನ್ನಾಭರಣಗಳು ಮತ್ತು 634 ಗ್ರಾಂ ತಾಮ್ರದ ತಂಬಿಗೆ ಪತ್ತೆಯಾಗಿದ್ದು, ಅವುಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸಂಪೂರ್ಣ ಘಟನೆ ಬೆಳಕಿಗೆ ಬರಲು ಕಾರಣನಾದ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ನಿಜಕ್ಕೂ ಅನುಕರಣೀಯ ಎಂದು ಸಚಿವ ಎಚ್ ಕೆ ಪಾಟೀಲ ಅವರು ಶ್ಲಾಘಿಸಿದರು.
ಜನೇವರಿ 10 ರಂದು ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಲಕ್ಕುಂಡಿಯ ಲಕ್ಮ್ಮೀನಾರಾಯಣ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಮಾಹಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ಬಂದಿದೆ. ನಿಧಿ ಎಷ್ಟೇ ದೊಡ್ಡದಾಗಿರಲಿ, ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿರುವ ಈ ಬಾಲಕನ ನಡೆ ನಿಧಿಗಿಂತಲೂ ದೊಡ್ಡದು ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು ಎಂದಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಅವರು ಹೇಳಿದರು.
ರಾಷ್ಟ್ರಕೂಟರು ಮತ್ತು ಚಾಲುಕ್ಯರು ಆಳ್ವಿಕೆ ನಡೆಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿ ಒಂದು ವಿಶಿಷ್ಟ ಸ್ಥಳವಾಗಿದೆ. ಇಂತಹ ಪುರಾತನ ಮತ್ತು ಮಹತ್ವದ ಪ್ರದೇಶಗಳಲ್ಲಿ ಕೆಲವೊಮ್ಮೆ ಅಚ್ಚರಿಯ ಘಟನೆಗಳು ಸಂಭವಿಸುವುದು ಸಹಜ. ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು.
ಪ್ರಜ್ವಲ್ ರಿತ್ತಿ ಅವರು ಪತ್ತೆಯಾದ ತಾಮ್ರದ ತಂಬಿಗೆಯನ್ನು ದೇವರ ಕೋಣೆಯಲ್ಲಿ ಸುರಕ್ಷಿತವಾಗಿ ಇಟ್ಟು ಕೀಲಿ ಹಾಕಿ ಭದ್ರಪಡಿಸಿದ್ದರು. ನಂತರ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ, ಪತ್ತೆಯಾದ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿರುವುದು ಅಪೂರ್ವ ಉದಾಹರಣೆ ಎಂದು ಹೇಳಿದರು.
ಕಾನೂನಿನ ಪ್ರಕಾರ ಪತ್ತೆಯಾದ ನಿಧಿಯನ್ನು ಯಾವ ಸ್ಥಳದಲ್ಲಿ ಇಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಬಡ ಕುಟುಂಬ ಹಿನ್ನೆಲೆಯಲ್ಲಿರುವ ರಿತ್ತಿ ಕುಟುಂಬಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಈ ಕುಟುಂಬಕ್ಕೆ ನೀಡುವ ಯಾವುದೇ ಗೌರವವು ಇಡೀ ಲಕ್ಕುಂಡಿ ಗ್ರಾಮಕ್ಕೆ ನೀಡಿದ ಗೌರವವಾಗುತ್ತದೆ ಎಂದು ಸಚಿವ ಎಚ್ ಕೆ ಪಾಟೀಲ ಹೇಳಿದರು.
ಈ ಕುರಿತು ಬುಧವಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ, ಕುಟುಂಬಕ್ಕೆ ಯಾವ ರೀತಿಯ ಗೌರವ ಮತ್ತು ನೆರವು ನೀಡಬೇಕು ಎಂಬ ನಿರ್ಧಾರವನ್ನು ಸಂಜೆಯೊಳಗೆ ಪ್ರಕಟಿಸಲಾಗುವುದು ಎಂದು ಹೇಳಿದರು.
ಜಗತ್ತಿನಾದ್ಯಂತ ಇಂತಹ ಘಟನೆಗಳನ್ನು ನೋಡಿದಾಗ, ಸಿಕ್ಕ ಅಮೂಲ್ಯ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿರುವ ಉದಾಹರಣೆಗಳು ಬಹಳ ವಿರಳ. ಲಕ್ಕುಂಡಿಯ ಪ್ರಾಚ್ಯವಸ್ತು ಸಂಗ್ರಹ ಕಾರ್ಯಕ್ರಮದಡಿ, ಗ್ರಾಮಸ್ಥರು ಈಗಾಗಲೇ 1100 ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಈ ಗ್ರಾಮದ ಸಂಸ್ಕೃತಿ ಮತ್ತು ಹಿರಿಮೆಯನ್ನು ತೋರಿಸುತ್ತದೆ ಎಂದು ಎಚ್.ಕೆ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಲಕ್ಕುಂಡಿ ಪ್ರಾಧಿಕಾರ ಸದಸ್ಯ ಸಿದ್ದಲಿಂಗೇಶ ಪಾಟೀಲ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾದ್ಯಕ್ಷ ಬಿ ಬಿ ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೊಗೇರಿ ಹಾಗೂ ನಿಧಿ ಸಿಕ್ಕ ಸ್ಥಳದ ಮಾಲಕರು, ಗ್ರಾಮ ಪಂಚಾಯತ್ ಸದಸ್ಯರು, ಪುರಾತತ್ವ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP