ಆಯವ್ಯಯ ರೂಪಣೆಗೆ ಸಾರ್ವಜನಿಕರ ಮುಕ್ತ ಸಲಹೆ ಅಗತ್ಯ: ಡಿಸಿ
ಗದಗ, 13 ಜನವರಿ (ಹಿ.ಸ.) ಆ್ಯಂಕರ್: ೨೦೨೬–೨೦೨೭ನೇ ಸಾಲಿನ ಆಯವ್ಯಯ ರೂಪಿಸುವ ಸಂಬಂಧ ಸಾರ್ವಜನಿಕರು ಮುಕ್ತವಾಗಿ ತಮ್ಮ ಸಲಹೆ–ಸೂಚನೆಗಳನ್ನು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು. ಗದಗ ಬೆಟಗೇರಿ ನಗರಸಭೆಯ ಸಭಾಂಗಣದಲ್ಲಿ ಜರುಗಿದ ೨೦೨೬–೨೦೨೭ನೇ ಸಾಲಿನ ಆಯವ್ಯಯ ಪೂರ್ವಭಾವಿ ಸ
ಫೋಟೋ


ಗದಗ, 13 ಜನವರಿ (ಹಿ.ಸ.)

ಆ್ಯಂಕರ್:

೨೦೨೬–೨೦೨೭ನೇ ಸಾಲಿನ ಆಯವ್ಯಯ ರೂಪಿಸುವ ಸಂಬಂಧ ಸಾರ್ವಜನಿಕರು ಮುಕ್ತವಾಗಿ ತಮ್ಮ ಸಲಹೆ–ಸೂಚನೆಗಳನ್ನು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಗದಗ ಬೆಟಗೇರಿ ನಗರಸಭೆಯ ಸಭಾಂಗಣದಲ್ಲಿ ಜರುಗಿದ ೨೦೨೬–೨೦೨೭ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ನಗರವನ್ನು ಸುಂದರ ಹಾಗೂ ಅಭಿವೃದ್ಧಿಗೊಂಡ ನಗರವನ್ನಾಗಿ ರೂಪಿಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲು ಸಾರ್ವಜನಿಕರಿಂದ ಬರುವ ಸಲಹೆಗಳು ಮಾರ್ಗದರ್ಶಿಯಾಗಲಿವೆ ಎಂದರು.

ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿ, ನಗರದಾದ್ಯಂತ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಆಯವ್ಯಯ ಪೂರ್ವಭಾವಿ ಹಂತದಲ್ಲಿಯೇ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲು ನಗರಸಭೆ ಸಿದ್ಧವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು, ನಗರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಸಮಗ್ರವಾಗಿ ವಸೂಲಿ ಮಾಡಿದಲ್ಲಿ ನಗರಸಭೆಯ ಆದಾಯ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಗ್ರಂಥಾಲಯಗಳ ಅಭಿವೃದ್ಧಿ ಹಾಗೂ ಕ್ಲಾತ್ ಮಾರ್ಕೆಟ್‌ನಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸುವಂತೆ ಮನವಿ ಮಾಡಿದರು.

ಮಾತಂಡಪ್ಪ ಹಾದಿಮನಿ ಮಾತನಾಡಿ, ಸರ್ಕಾರ ಬಿ-ಖಾತೆ ಹೊಂದಿರುವವರಿಗೆ ಎ-ಖಾತೆಗೆ ಪರಿವರ್ತನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದವರಿಗೆ ಹೊಸ ಅವಕಾಶ ಲಭಿಸುತ್ತದೆ ಎಂದರು. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅಂತ್ಯದಲ್ಲಿ ತೆರಿಗೆ ಪಾವತಿಗೆ ನಗರಸಭೆ ಆವರಣದಲ್ಲಿ ಕೌಂಟರ್ ತೆರೆಯಬೇಕು. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಲ್ಯಾಪ್‌ಟಾಪ್ ಸೌಲಭ್ಯವನ್ನು ಎಸ್‌ಸಿ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಇಮಿತಿಯಾಜ್ ಮಾತನಾಡಿ, ಸ್ಲಮ್ ಪ್ರದೇಶಗಳಲ್ಲಿ ಇನ್ನೂ ಬಯಲು ಶೌಚಾಲಯಕ್ಕೆ ತೆರಳುವ ಪರಿಸ್ಥಿತಿ ಇದ್ದು, ಗೌರವ ಘಟಕಗಳ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದರು.

ಆರ್.ಜಿ. ಅರಮಾನಿ ಮಾತನಾಡಿ, ನಾಲ್ಕನೇ ವಾರ್ಡ್‌ನಲ್ಲಿರುವ ಉದ್ಯಾನವನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಅರವಿಂದ ಪಟೇಲ್ ಮಾತನಾಡಿ, ವಾಕರಸಾಲಿ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಜವಳಿ ನಾಕದಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು.

ಮೋಹನ್ ಕಟ್ಟಿಮನಿ ಮಾತನಾಡಿ, ಸೆಟ್ಲಿಮೆಂಟ್ ಪ್ರದೇಶದ ಜನರಿಗಾಗಿ ಪ್ರತ್ಯೇಕ ಬಜೆಟ್ ಮೀಸಲಿಡಬೇಕೆಂದು ಒತ್ತಾಯಿಸಿದರು.

ರಾಘವೇಂದ್ರ ಪಾಲಕಾರ ಮಾತನಾಡಿ, ನಗರದಲ್ಲಿರುವ ಅನಧಿಕೃತ ಮಳಿಗೆಗಳನ್ನು ಅಧಿಕೃತಗೊಳಿಸಿದರೆ ತೆರಿಗೆ ಆದಾಯ ಹೆಚ್ಚಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಬರ್ಕತ್ ಅಲಿ ಮುಲ್ಲ ಸೇರಿದಂತೆ ನಗರಸಭೆ ಸದಸ್ಯರು, ಶರಣಪ್ಪ ಗೋಳಗೋಳಕಿ, ನಗರಸಭೆ ಲೆಕ್ಕ ಪರಿಶೋಧಕ ಟಿ.ಎಚ್. ದ್ಯಾವನೂರು, ಸುಷ್ಮಾ ಗುಡಿ, ಜಗದೀಶ ಕೋನರಡ್ಡಿ, ಎಂ.ಆರ್. ಪಾಟೀಲ, ಎಂ.ಎಂ. ಮಕಾನಂದಾರ, ಶಬಾನ ದಳವಾಯಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande