ನಿಧಿ ಸಿಕ್ಕ ಸ್ಥಳಕ್ಕೆ ಸಚಿವ ಎಚ್ ಕೆ ಪಾಟೀಲ್ ಭೇಟಿ
ಗದಗ, 13 ಜನವರಿ (ಹಿ.ಸ.) ಆ್ಯಂಕರ್: ರಾಷ್ಟ್ರಕೂಟರು ಹಾಗೂ ಚಾಲುಕ್ಯರ ಆಳ್ವಿಕೆಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಪ್ರಕರಣ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು, ಈ ಕುರಿತು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರ
ಫೋಟೋ


ಗದಗ, 13 ಜನವರಿ (ಹಿ.ಸ.)

ಆ್ಯಂಕರ್:

ರಾಷ್ಟ್ರಕೂಟರು ಹಾಗೂ ಚಾಲುಕ್ಯರ ಆಳ್ವಿಕೆಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಪ್ರಕರಣ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು, ಈ ಕುರಿತು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಲಕ್ಕುಂಡಿ ಗ್ರಾಮದ ಶ್ರೀ ಲಕ್ಮ್ಮೀನಾರಾಯಣ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಲಕ್ಕುಂಡಿ ಒಂದು ವಿಶಿಷ್ಟ ಹಾಗೂ ಅಪರೂಪದ ಐತಿಹಾಸಿಕ ತಾಣವಾಗಿದ್ದು, ಇಂತಹ ಪುರಾತನ ಪ್ರದೇಶಗಳಲ್ಲಿ ಕೆಲವೊಮ್ಮೆ ಅಚ್ಚರಿಯ ಘಟನೆಗಳು ಸಂಭವಿಸುವುದು ಸಹಜ. ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.

ಇತ್ತೀಚೆಗೆ ಲಕ್ಕುಂಡಿಯಲ್ಲಿ ಪತ್ತೆಯಾಗಿರುವ ನಿಧಿಯಲ್ಲಿ ಚಿನ್ನದ ಆಭರಣಗಳು ಹಾಗೂ ತಾಮ್ರದ ತಂಬಿಗೆ ಸೇರಿವೆ. ಈ ಅಮೂಲ್ಯ ವಸ್ತುಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂಪೂರ್ಣ ಘಟನೆ ಬೆಳಕಿಗೆ ಬರಲು ಕಾರಣವಾದವರು 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ. ಬಾಲಕನ ಪ್ರಾಮಾಣಿಕತೆ ನಿಜಕ್ಕೂ ಅನುಕರಣೀಯವಾಗಿದ್ದು, ಪತ್ತೆಯಾದ ತಾಮ್ರದ ತಂಬಿಗೆಯನ್ನು ದೇವರ ಕೋಣೆಯಲ್ಲಿ ಸುರಕ್ಷಿತವಾಗಿ ಇಟ್ಟು ಕೀಲಿ ಹಾಕಿ ಭದ್ರಪಡಿಸಿದ ಬಳಿಕ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ, ಪತ್ತೆಯಾದ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿರುವುದು ಅಪೂರ್ವ ಉದಾಹರಣೆಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಧಿ ಎಷ್ಟೇ ದೊಡ್ಡದಾಗಿರಲಿ, ಅದನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸುವ ಮನೋಭಾವವೇ ದೊಡ್ಡದು. ಈ ಬಾಲಕನ ನಡೆ ನಿಧಿಗಿಂತಲೂ ದೊಡ್ಡದು. ಈ ವಿಚಾರ ಈಗಾಗಲೇ ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಿದ್ದು, ಕಾನೂನಿನ ಪ್ರಕಾರ ಪತ್ತೆಯಾದ ನಿಧಿಯನ್ನು ಯಾವ ಸ್ಥಳದಲ್ಲಿ ಇರಿಸಬೇಕು ಎಂಬುದರ ಕುರಿತು ಜಿಲ್ಲಾಡಳಿತ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಎಚ್.ಕೆ. ಪಾಟೀಲ ತಿಳಿಸಿದರು.

ಬಡ ಕುಟುಂಬ ಹಿನ್ನೆಲೆಯಲ್ಲಿರುವ ರಿತ್ತಿ ಕುಟುಂಬಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಈ ಕುಟುಂಬಕ್ಕೆ ನೀಡುವ ಯಾವುದೇ ಗೌರವವು ಇಡೀ ಲಕ್ಕುಂಡಿ ಗ್ರಾಮಕ್ಕೆ ನೀಡಿದ ಗೌರವವಾಗುತ್ತದೆ. ಈ ಕುರಿತು ನಾಳೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಕುಟುಂಬಕ್ಕೆ ಯಾವ ರೀತಿಯ ಗೌರವ ಮತ್ತು ನೆರವು ನೀಡಬೇಕು ಎಂಬ ಅಂತಿಮ ನಿರ್ಧಾರವನ್ನು ನಾಳೆ ಸಂಜೆಯೊಳಗೆ ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು.

ಜಗತ್ತಿನಾದ್ಯಂತ ಇಂತಹ ಘಟನೆಗಳನ್ನು ಗಮನಿಸಿದಾಗ, ಸಿಕ್ಕ ಅಮೂಲ್ಯ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿರುವ ಉದಾಹರಣೆಗಳು ಬಹಳ ವಿರಳ. ಲಕ್ಕುಂಡಿಯ ಪ್ರಾಚ್ಯವಸ್ತು ಸಂಗ್ರಹ ಕಾರ್ಯಕ್ರಮದಡಿ ಗ್ರಾಮಸ್ಥರು ಈಗಾಗಲೇ 1100 ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಈ ಗ್ರಾಮದ ಸಂಸ್ಕೃತಿ, ಮೌಲ್ಯಗಳು ಹಾಗೂ ಐತಿಹಾಸಿಕ ಹಿರಿಮೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಲಕ್ಕುಂಡಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಅದ್ಭುತ ಐತಿಹಾಸಿಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ. ಈಗಾಗಲೇ ಲಕ್ಕುಂಡಿಯಲ್ಲಿನ 16 ದೇವಸ್ಥಾನಗಳು ಹಾಗೂ 16 ಬಾವಿಗಳನ್ನು ಸರ್ಕಾರ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. ಅಲ್ಲದೆ 165 ಲಕ್ಷ ರೂ. ವೆಚ್ಚದಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ಹಂತದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಲಕ್ಕುಂಡಿಯ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಚಿವರು ಘೋಷಿಸಿದರು.

ಅಧಿಕಾರಿಗಳ ಹೇಳಿಕೆಗಳಿಂದ ಉಂಟಾಗಿದ್ದ ಗೊಂದಲವನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಬಗೆಹರಿಸಿದ್ದು, ಲಕ್ಕುಂಡಿ ಗ್ರಾಮ ತನ್ನ ಪ್ರಾಮಾಣಿಕತೆಯ ಜೊತೆಗೆ ತನ್ನ ಐತಿಹಾಸಿಕ ಹಿರಿಮೆಯನ್ನೂ ಮತ್ತೊಮ್ಮೆ ರಾಜ್ಯದ ಮುಂದಿಟ್ಟಿದೆ. ಕಾನೂನು ಪ್ರಕಾರ ರಿತ್ತಿ ಕುಟುಂಬಕ್ಕೆ ನೀಡಬೇಕಾದ ಎಲ್ಲಾ ಗೌರವ ಮತ್ತು ನೆರವನ್ನು ಸರ್ಕಾರ ಖಚಿತವಾಗಿ ನೀಡಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಈ ವೇಳೆ ಪ್ರಾಧಿಕಾರ ಸದಸ್ಯ ಸಿದ್ದು ಪಾಟೀಲ, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮತ್ತು ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande