
ಬೆಂಗಳೂರು, 13 ಜನವರಿ (ಹಿ.ಸ.);
ಆ್ಯಂಕರ್:ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಜರ್ಮನಿ ದೇಶದ ಚಾನ್ಸಲರ್ ಕರ್ನಾಟಕಕ್ಕೆ ಆಗಮಿಸಿದ್ದರೂ, ರಾಜ್ಯ ಸರ್ಕಾರ ಈ ಮಹತ್ವದ ಭೇಟಿಗೆ ಅಗತ್ಯ ಆದ್ಯತೆ ನೀಡದೆ ರಾಜಕೀಯ ಗುಲಾಮಗಿರಿಯನ್ನೇ ಮೆರೆದಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂತಹ ಜಾಗತಿಕ ನಾಯಕರ ಭೇಟಿ ಯಾವುದೇ ಜವಾಬ್ದಾರಿಯುತ ಮುಖ್ಯಮಂತ್ರಿಗೆ ರಾಜ್ಯದ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಅಭಿವೃದ್ಧಿಯನ್ನು ವೃದ್ಧಿಸಿಕೊಳ್ಳಲು ಸಿಕ್ಕಿರುವ ಸುವರ್ಣ ಅವಕಾಶವಾಗಿರುತ್ತಿತ್ತು. ಆದರೆ ಕರ್ನಾಟಕದ ದುರಂತವೆಂದರೆ, ಈ ಅವಕಾಶವನ್ನು ಬಳಸಿಕೊಳ್ಳುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಮೆಚ್ಚಿಸಲು ಹೊರಟಿದ್ದಾರೆ ಎಂದು ಅಶೋಕ ಟೀಕಿಸಿದರು.
ಒಂದೆಡೆ ಜರ್ಮನಿಯ ಚಾನ್ಸಲರ್ ಬೆಂಗಳೂರಿಗೆ ಆಗಮಿಸಿದರೆ, ಮತ್ತೊಂದೆಡೆ ಸಿಎಂ ಹಾಗೂ ಡಿಸಿಎಂ ಅವರು ಊಟಿಗೆ ಹೋಗುವ ದಾರಿಯಲ್ಲಿ ಸುಮ್ಮನೆ ಹಾದುಹೋಗುತ್ತಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಮೈಸೂರಿನಲ್ಲಿ ಸಾಲುಗಟ್ಟಿ ನಿಂತಿದ್ದರು. ಇದು ಕೇವಲ ಶಿಷ್ಟಾಚಾರದ ಲೋಪವಲ್ಲ, ಕರ್ನಾಟಕದ ಹಿತಾಸಕ್ತಿಗೆ ಮಾಡಿದ ದ್ರೋಹ ಎಂದು ಅವರು ಆರೋಪಿಸಿದರು.
ವಿಶ್ವದ ಆರ್ಥಿಕ ಶಕ್ತಿಯ ನಾಯಕನ ಸ್ವಾಗತಕ್ಕೆ ಯಾವುದೇ ಆದ್ಯತೆ ಸಿಗಲಿಲ್ಲ. ಆದರೆ ಹೈಕಮಾಂಡ್ ಮೆಚ್ಚಿಸುವ ರಾಜಕೀಯ ಗುಲಾಮಗಿರಿಗೆ ಮಾತ್ರ ಸಂಪೂರ್ಣ ಪ್ರಾಮುಖ್ಯತೆ ನೀಡಲಾಯಿತು ಎಂದು ಕಿಡಿಕಾರಿದರು.
ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ನಿಷ್ಠೆಯೇ ದೊಡ್ಡದಾದಾಗ ಕನ್ನಡಿಗರ ಭವಿಷ್ಯಕ್ಕೆ ಕುತ್ತು ಬರುವುದು ಖಚಿತ. ಅಧಿಕಾರ ಉಳಿಸಿಕೊಳ್ಳುವ ಹಾಗೂ ಗಿಟ್ಟಿಸಿಕೊಳ್ಳುವ ದಾಹದಲ್ಲಿ ರಾಜ್ಯಕ್ಕೆ ದೊರಕಬಹುದಾದ ಹೂಡಿಕೆ ಮತ್ತು ಅಭಿವೃದ್ಧಿ ಅವಕಾಶಗಳನ್ನೇ ಈ ಸರ್ಕಾರ ಬಲಿಕೊಟ್ಟಿದೆ. ಇದರಿಂದ ಈ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ, ಕನ್ನಡಿಗರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಕನ್ನಡಿಗರಿಗೆ ಬೇಕಾಗಿರುವುದು ಕರ್ನಾಟಕದ ಬಗ್ಗೆ ಬದ್ಧತೆ ಮತ್ತು ಇಚ್ಛಾಶಕ್ತಿ ಹೊಂದಿರುವ ನಾಯಕರು. ಕುರ್ಚಿಗಾಗಿ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನೇ ಮರೆತು ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲುವ ಗುಲಾಮರು ಅಲ್ಲ ಎಂದು ಆರ್.ಅಶೋಕ ತೀವ್ರವಾಗಿ ಟೀಕಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa