ತುಮಕೂರು ಕ್ರೀಡಾಂಗಣದ ಹೆಸರು ಬದಲಾವಣೆ ಗಾಂಧೀಜಿಗೆ ಮಾಡಿದ ಅಪಮಾನ : ಬೊಮ್ಮಾಯಿ
ಬೆಂಗಳೂರು, 13 ಜನವರಿ (ಹಿ.ಸ.) : ಆ್ಯಂಕರ್ : ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಸರನ್ನು ಬದಲಿಸಿ ಪರಮೇಶ್ವರ ಹೆಸರು ಇಡಲು ರಾಜ್ಯ ಸರ್ಕಾರ ಕೈ ಹಾಕಿರುವುದು ಗಾಂಧೀಜಿಗೆ ಮಾಡಿದ ಘೋರ ಅಪಮಾನವಾಗಿದ್ದು, ಇದು ಕಾಂಗ್ರೆಸ್ ಪಕ್ಷದ ನಿಜ ಮುಖವಾಡವನ್ನು ಬಯಲು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂ
ತುಮಕೂರು ಕ್ರೀಡಾಂಗಣದ ಹೆಸರು ಬದಲಾವಣೆ ಗಾಂಧೀಜಿಗೆ ಮಾಡಿದ ಅಪಮಾನ : ಬೊಮ್ಮಾಯಿ


ಬೆಂಗಳೂರು, 13 ಜನವರಿ (ಹಿ.ಸ.) :

ಆ್ಯಂಕರ್ : ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಸರನ್ನು ಬದಲಿಸಿ ಪರಮೇಶ್ವರ ಹೆಸರು ಇಡಲು ರಾಜ್ಯ ಸರ್ಕಾರ ಕೈ ಹಾಕಿರುವುದು ಗಾಂಧೀಜಿಗೆ ಮಾಡಿದ ಘೋರ ಅಪಮಾನವಾಗಿದ್ದು, ಇದು ಕಾಂಗ್ರೆಸ್ ಪಕ್ಷದ ನಿಜ ಮುಖವಾಡವನ್ನು ಬಯಲು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಹೆಸರಿನಲ್ಲಿ ಬದಲಾವಣೆ ಮಾಡಿದಾಗ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಅದೇ ಕಾಂಗ್ರೆಸ್ ಈಗ ಮಹಾತ್ಮ ಗಾಂಧಿ ಹೆಸರಿನ ಕ್ರೀಡಾಂಗಣವನ್ನು ಬದಲಾಯಿಸಲು ಮುಂದಾಗಿರುವುದು ಅವರ ದ್ವಂದ್ವ ನಿಲುವಿಗೆ ಸ್ಪಷ್ಟ ಸಾಕ್ಷಿ ಎಂದರು.

ತುಮಕೂರು ಜಿಲ್ಲಾ ಕ್ರೀಡಾಂಗಣವನ್ನು ತಮ್ಮ ಆಡಳಿತಾವಧಿಯಲ್ಲಿ ಅಭಿವೃದ್ಧಿಪಡಿಸಿ ನಾನೇ ಉದ್ಘಾಟನೆ ಮಾಡಿದ್ದೇನೆ. ಪರಮೇಶ್ವರ ಅವರು ತಮ್ಮ ವೈಯಕ್ತಿಕ ಕಾಲೇಜು ಅಥವಾ ಖಾಸಗಿ ಮೈದಾನಕ್ಕೆ ತಮ್ಮ ಹೆಸರು ಇಡಬೇಕಿತ್ತು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ರಾಜೀವ್ ಗಾಂಧಿ ಯುನಿವರ್ಸಿಟಿ ಇದೆ; ಅದನ್ನು ಮಹಾತ್ಮ ಗಾಂಧಿ ಯುನಿವರ್ಸಿಟಿಯಾಗಿ ಮರುನಾಮಕರಣ ಮಾಡಲಿ. ಸಂಜಯ ಗಾಂಧಿ ಆಸ್ಪತ್ರೆಯೂ ಇದೆ. ಸಂಜಯ ಗಾಂಧಿ ರಾಷ್ಟ್ರನಾಯಕನಲ್ಲ. ಅಲ್ಲಿ ಕೂಡ ಮಹಾತ್ಮ ಗಾಂಧಿ ಹೆಸರನ್ನು ಇಡಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ನಾಯಕರಿಗೆ ನೆಹರು ಕುಟುಂಬದ ಭಜನೆಯ ಹೊರತು ಗಾಂಧೀ ತತ್ವಗಳ ಅರಿವಿಲ್ಲ. ವಾಸ್ತವವಾಗಿ ಮಹಾತ್ಮ ಗಾಂಧಿ ತತ್ವಗಳನ್ನು ಕೊಲೆ ಮಾಡಿರುವುದು ಕಾಂಗ್ರೆಸ್‌ವೇ ಎಂದು ಆರೋಪಿಸಿದರು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಗಾಂಧೀಜಿ ಹೇಳಿದ್ದರು. ಆದರೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಅದನ್ನು ಮುಂದುವರೆಸಿಕೊಂಡು ಬಂದಿದೆ. ಮಹಾತ್ಮ ಗಾಂಧಿ ಹೆಸರು ಹೇಳುವ ನೈತಿಕತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಇಲ್ಲ ಎಂದು ಬೊಮ್ಮಾಯಿ ಕಿಡಿಕಾರಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande