ಬಾಂಗ್ಲಾದೇಶದ ಮಾತರಬರಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಅವಘಡ
ಢಾಕಾ, 13 ಜನವರಿ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯ ಮಹೇಶ್‌ಖಾಲಿ ಉಪಜಿಲ್ಲೆಯಲ್ಲಿ ಸ್ಥಿತವಾಗಿರುವ ಮಾತರಬರಿ ಉಷ್ಣ ವಿದ್ಯುತ್ ಸ್ಥಾವರದ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಸೋಮವಾರ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ಹಾಗೂ ನಾಗರ
Bangladeshpower-plantFire-breaks


ಢಾಕಾ, 13 ಜನವರಿ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯ ಮಹೇಶ್‌ಖಾಲಿ ಉಪಜಿಲ್ಲೆಯಲ್ಲಿ ಸ್ಥಿತವಾಗಿರುವ ಮಾತರಬರಿ ಉಷ್ಣ ವಿದ್ಯುತ್ ಸ್ಥಾವರದ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಸೋಮವಾರ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ಹಾಗೂ ನಾಗರಿಕ ರಕ್ಷಣಾ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಢಾಕಾ ಟ್ರಿಬ್ಯೂನ್ ಪತ್ರಿಕೆಯ ವರದಿಯ ಪ್ರಕಾರ, ರಾತ್ರಿ ಸುಮಾರು 9.15ರ ವೇಳೆಗೆ ಸ್ಥಾವರದ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಹೇಶ್‌ಖಾಲಿ ಅಗ್ನಿಶಾಮಕ ಮತ್ತು ನಾಗರಿಕ ರಕ್ಷಣಾ ಇಲಾಖೆಯ ನಿಲ್ದಾಣದ ಮುಖ್ಯಸ್ಥ ರಾಮಪ್ರಸಾದ್ ಸೇನ್ ಅವರು, ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳವನ್ನು ಅಗತ್ಯ ಸಂಪನ್ಮೂಲಗಳೊಂದಿಗೆ ಸ್ಥಳಕ್ಕೆ ಕಳುಹಿಸಲಾಯಿತು ಎಂದು ತಿಳಿಸಿದ್ದಾರೆ.

ಸತತ ಪ್ರಯತ್ನದ ಫಲವಾಗಿ ಸುಮಾರು ಎರಡು ಗಂಟೆಗಳೊಳಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.

ಸ್ಥಾವರದ ಸಮೀಪದ ಸೇತುವೆ ಪ್ರದೇಶದಿಂದಲೇ ವಿದ್ಯುತ್ ಸ್ಥಾವರದೊಳಗೆ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಇದೇ ವೇಳೆ, ಮಹೇಶ್‌ಖಾಲಿ ಉಪಜಿಲ್ಲಾ ಮ್ಯಾಜಿಸ್ಟ್ರೇಟ್ ಇಮ್ರಾನ್ ಮಹಮೂದ್ ದಲೀಮ್ ಅವರು, ರಾತ್ರಿ 8.45ರ ಸುಮಾರಿಗೆ ವಿದ್ಯುತ್ ಸ್ಥಾವರದ ಉತ್ಪಾದನಾ ಘಟಕದ ಸಮೀಪ ಬೆಂಕಿ ಕಾಣಿಸಿಕೊಂಡಿತ್ತು ಎಂದು ಮಾಹಿತಿ ನೀಡಿದ್ದಾರೆ.

ಆದರೆ, ತಕ್ಷಣ ಕೈಗೊಂಡ ಕ್ರಮದಿಂದಾಗಿ ಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಿಸಲಾಗಿದ್ದು, ವಿದ್ಯುತ್ ಉತ್ಪಾದನಾ ಘಟಕಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಅವಘಡದ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿದ್ಯುತ್ ಸ್ಥಾವರದ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande