
ಅಹಮದಾಬಾದ್, 12 ಜನವರಿ (ಹಿ.ಸ.) :
ಆ್ಯಂಕರ್ : ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಎರಡು ದಿನಗಳ ಅಧಿಕೃತ ಭಾರತ ಭೇಟಿಗಾಗಿ ಸೋಮವಾರ ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಚಾನ್ಸೆಲರ್ ಆದ ಬಳಿಕ ಇದು ಅವರ ಮೊದಲ ಏಷ್ಯಾ ಪ್ರವಾಸವಾಗಿದ್ದು, ಈ ಭೇಟಿಗೆ ವಿಶೇಷ ಮಹತ್ವ ನೀಡಲಾಗಿದೆ.
ಅಹಮದಾಬಾದ್‌ಗೆ ಆಗಮಿಸಿದ ಚಾನ್ಸೆಲರ್ ಮೆರ್ಜ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಬರಮತಿ ಆಶ್ರಮದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಉಭಯ ನಾಯಕರು ಸಬರಮತಿ ಆಶ್ರಮ ಪುನರ್ ಅಭಿವೃದ್ಧಿ ಯೋಜನೆಯನ್ನು ಪರಿಶೀಲಿಸಿದರು. ಆಶ್ರಮ ಭೇಟಿ ಬಳಿಕ ಪ್ರಧಾನಿ ಮೋದಿ ಮತ್ತು ಚಾನ್ಸೆಲರ್ ಮೆರ್ಜ್ ಅವರು ಒಂದೇ ಕಾರಿನಲ್ಲಿ ಸಬರಮತಿ ನದಿ ದಂಡೆಗೆ ತೆರಳಿದರು.
ಪ್ರಧಾನಿ ಮೋದಿ ಅವರು ಇಂದು ಸಬರಮತಿ ನದಿ ದಂಡೆಯಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ–2026 ಅನ್ನು ಉದ್ಘಾಟಿಸಲಿದ್ದಾರೆ. ಉತ್ತರಾಯಣ ಹಬ್ಬದ ಅಂಗವಾಗಿ, ಪ್ರಧಾನಿ ಮೋದಿ ಮತ್ತು ಚಾನ್ಸೆಲರ್ ಮೆರ್ಜ್ ಇಬ್ಬರೂ ಒಟ್ಟಿಗೆ ಗಾಳಿಪಟ ಹಾರಿಸುವ ನಿರೀಕ್ಷೆಯಿದೆ. ಈ ಉತ್ಸವದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ ಗಾಳಿಪಟ ಉತ್ಸಾಹಿಗಳು ಭಾಗವಹಿಸುತ್ತಿದ್ದಾರೆ.
ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರ ಈ ಭೇಟಿಯು ವ್ಯಾಪಾರ, ಹೂಡಿಕೆ, ರಕ್ಷಣೆ ಹಾಗೂ ನಿರ್ಣಾಯಕ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಭಾರತ–ಜರ್ಮನಿ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ. ಭೇಟಿಯ ಅವಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದ್ದು, ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಅಂಶಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa