ಆಲೂಗಡ್ಡೆ ಬೆಳೆಗೆ ಪುನಶ್ಚೇತನ ; ರಾಜ್ಯ ಮಟ್ಟದ ಮೇಳ
ನಾನಾ
Poster


ಹಾಸನ, 12 ಜನವರಿ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ, ನಾನಾ ರೋಗಗಳಿಂದ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ, ಬೆಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ರಾಜ್ಯಮಟ್ಟದ ಆಲೂಗಡ್ಡೆ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಲೋಕ ಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯಮಟ್ಟದ ಆಲೂಗಡ್ಡೆ ಮೇಳದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ನಾನಾ ಇಲಾಖೆಗಳು ಮತ್ತು ಸಂಸ್ಥೆಗಳು, ಜಿಲ್ಲೆಯ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಎಪಿಎಂಸಿ ವರ್ತಕರ ಸಂಘ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಬಾಗಲಕೋಟೆ) ಹಾಗೂ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಕೇಂದ್ರ (ಶಿಮ್ಲಾ) ಇವರ ಸಹಭಾಗಿತ್ವದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಸಮೀಪ ಜ.26 ಮತ್ತು 27ರಂದು ರಾಜ್ಯಮಟ್ಟದ ಆಲೂಗಡ್ಡೆ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದರು.

ಹಾಸನ ಜಿಲ್ಲೆ ಆಲೂಗಡ್ಡೆ ಬೆಳೆಗೆ ಪ್ರಸಿದ್ಧವಾಗಿದ್ದು, ಸುಮಾರು 15 ವರ್ಷಗಳ ಹಿಂದೆ 40–50 ಸಾವಿರ ಹೆಕ್ಟೇರ್‌ಗಳಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಆದರೆ ಅಂಗಮಾರಿ ರೋಗ ಸೇರಿದಂತೆ ವಿವಿಧ ರೋಗಗಳ ಹಾವಳಿಯಿಂದ ಈಗ ಬೆಳೆಯ ವಿಸ್ತೀರ್ಣ 4–5 ಸಾವಿರ ಹೆಕ್ಟೇರ್‌ಗೆ ಇಳಿದಿದೆ ಎಂದು ಹೇಳಿದರು.

ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಕೊರತೆ, ಹೆಚ್ಚಿದ ಉತ್ಪಾದನಾ ವೆಚ್ಚ, ಮುಂಗಾರು ಹಂಗಾಮಿನಲ್ಲಿ ಕೊಳೆರೋಗ ಹಾಗೂ ಅಂಗಮಾರಿ ರೋಗದ ಬಾಧೆಗಳಿಂದಾಗಿ ರೈತರು ವರ್ಷದಿಂದ ವರ್ಷಕ್ಕೆ ಆಲೂಗಡ್ಡೆ ಬಿತ್ತನೆ ಕೈಬಿಡುತ್ತಿರುವ ಸ್ಥಿತಿ ಉಂಟಾಗಿದೆ ಎಂದು ವಿವರಿಸಿದರು.

ಮೇಳದಲ್ಲಿ ಆಲೂಗಡ್ಡೆ ಬೆಳೆಯ ಹೊಸ ತಳಿಗಳ ಪರಿಚಯ, ಸುಧಾರಿತ ಸಸಿ ಸಂಸ್ಕರಣೆ, ಔಷಧಿ ಬಳಕೆ ವಿಧಾನ, ಯಾಂತ್ರೀಕರಣ, ಬೀಜ ಉತ್ಪಾದನೆ ಕುರಿತ ತಾಂತ್ರಿಕ ಮಾಹಿತಿ ನೀಡಲಾಗುವುದು. ಆಲೂಗಡ್ಡೆ ಬೀಜ ಉತ್ಪಾದಕರಾದ ರೈತರು, ಸಂಸ್ಥೆಗಳು, ಸಂಶೋಧನಾ ಕೇಂದ್ರಗಳ ತಜ್ಞರು, ಔಷಧಿ ಹಾಗೂ ಬೀಜ ಕಂಪನಿಗಳು ಭಾಗವಹಿಸಲಿದ್ದು, ಸಂಸ್ಕರಣ ಕೈಗಾರಿಕೆಗಳು ಮತ್ತು ರೈತರ ನಡುವೆ ಸಂಪರ್ಕ ಬೆಳೆಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande