
ನವದೆಹಲಿ, 12 ಜನವರಿ (ಹಿ.ಸ.) :
ಆ್ಯಂಕರ್ : ಯುವಶಕ್ತಿಯೇ ರಾಷ್ಟ್ರ ನಿರ್ಮಾಣಕ್ಕೆ ಅತ್ಯಂತ ಶಕ್ತಿಶಾಲಿ ಮತ್ತು ದೃಢವಾದ ಅಡಿಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಆಚರಿಸಲಾಗುತ್ತಿರುವ ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ ಪ್ರಧಾನಿ ಅವರು ಯುವಜನರ ಪಾತ್ರವನ್ನು ಎತ್ತಿ ಹಿಡಿದು, ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಕರೇ ಮುನ್ನಡೆಯ ಶಕ್ತಿಯೆಂದು ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತೀಯ ಯುವಕರು ತಮ್ಮ ಉತ್ಸಾಹ, ಶಕ್ತಿ, ಆತ್ಮಸ್ಥೈರ್ಯ ಮತ್ತು ನವೀನ ಚಿಂತನೆಯ ಮೂಲಕ ಪ್ರತಿಯೊಂದು ಸವಾಲನ್ನೂ ಅವಕಾಶವಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು. “ಯುವಶಕ್ತಿ ಜಾಗೃತವಾದಾಗ, ರಾಷ್ಟ್ರದ ಪ್ರಗತಿಯನ್ನು ತಡೆಯಲು ಯಾವುದೇ ಅಡ್ಡಿಯೂ ಸಾಕಾಗದು” ಎಂದು ಅವರು ತಿಳಿಸಿದರು.
ಇಂದಿನ ಯುವಕರು ಶಿಕ್ಷಣ, ತಂತ್ರಜ್ಞಾನ, ಸಂಶೋಧನೆ, ಉದ್ಯಮಶೀಲತೆ ಮತ್ತು ಸೇವಾ ಕ್ಷೇತ್ರಗಳಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಪ್ರಧಾನವಾಗಿ ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕೆಂದು ಪ್ರಧಾನಿ ಕರೆ ನೀಡಿದರು.
ಆತ್ಮನಿರ್ಭರ ಭಾರತ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಕನಸು ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಲೇ ಸಾಕಾರಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿ, “ಆಂಗಣವೇದಿ ವಸುಧಾ ಕುಲ್ಯಾ ಜಲಧಿಃ ಸ್ಥಾಲೀ ಚ ಪಟಾಲಂ |
ವಾಲ್ಮೀಕಶ್ಚ ಸುಮೇರುಃ ಕೃತಪ್ರತಿಜ್ಞಸ್ಯ ವೀರಸ್ಯ” ಎಂದು ಹೇಳಿದರು.
ದೃಢ ಸಂಕಲ್ಪ ಹೊಂದಿರುವ ಯೋಧನಿಗೆ ಸೀಮಿತ ಸಂಪನ್ಮೂಲಗಳೂ ಅಪಾರವಾಗುತ್ತವೆ ಹಾಗೂ ಕಷ್ಟಗಳು ಸಹ ಅವಕಾಶಗಳಾಗಿ ಪರಿವರ್ತಗೊಳ್ಳುತ್ತವೆ ಎಂಬ ಸಂದೇಶವನ್ನು ಈ ಶ್ಲೋಕ ಸಾರುತ್ತದೆ ಎಂದು ಪ್ರಧಾನಿ ವಿವರಿಸಿದರು.
ಸ್ವಾಮಿ ವಿವೇಕಾನಂದರು ಯುವಜನರನ್ನು ರಾಷ್ಟ್ರದ ಜೀವಾಳವೆಂದು ಕಂಡಿದ್ದರು. ಅವರ ಆಲೋಚನೆಗಳು ಮತ್ತು ಜೀವನದರ್ಶಗಳು ಇಂದಿಗೂ ಭಾರತೀಯ ಯುವಕರಿಗೆ ದಾರಿದೀಪವಾಗಿವೆ ಎಂದು ಪ್ರಧಾನಿ ಹೇಳಿದರು. ಯುವಕರು ತಮ್ಮ ಶಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬಳಸಿದರೆ, ಭಾರತ ಜಾಗತಿಕ ನಾಯಕತ್ವದ ಹಾದಿಯಲ್ಲಿ ಇನ್ನಷ್ಟು ವೇಗವಾಗಿ ಮುನ್ನಡೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಯುವ ದಿನದ ಅಂಗವಾಗಿ ದೇಶದ ಯುವಜನತೆಗೆ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ ಮೋದಿ, ಈ ದಿನವು ಯುವಕರಲ್ಲಿ ಹೊಸ ಸಂಕಲ್ಪ, ಆತ್ಮವಿಶ್ವಾಸ ಮತ್ತು ದೇಶಸೇವೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿ ಎಂದು ಆಶಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa