
ವಿಜಯಪುರ, 12 ಜನವರಿ (ಹಿ.ಸ.) :
ಆ್ಯಂಕರ್ : ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಬಿ.ಎಲ್.ಡಿ.ಇ ಟ್ರಾಮಾ ಸೆಂಟರ ಮಿನಿ ಆಡಿಟೋರಿಯಂ ನಲ್ಲಿ ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಬಿ.ಎಲ್.ಡಿ.ಇ ಆರೋಗ್ಯ ಯೋಜನೆ ಕುಟುಂಬ ಆರೋಗ್ಯ ಹೆಲ್ತ್ ಕಾರ್ಡ ವಿತರಿಸಿ ಅವರು ಮಾತನಾಡಿದರು.
ಆರೋಗ್ಯವೇ ಭಾಗ್ಯ ಎಂಬುದು ಹಳೆಯ ಮಾತು. ಈಗ ಉತ್ತಮ ಮತ್ತು ಸದೃಢ ಆರೋಗ್ಯ ಹೊಂದುವುದು ಮಹತ್ವದ್ದಾಗಿದೆ. ನಾವು ಬದುಕಿರುವವರೆಗೂ ಯಾವುದೇ ಆರೋಗ್ಯ ಸಮಸ್ಯೆಗೆ ಒಳಗಾಗದೆ, ಪರಾವಲಂಬಿ ಜೀವನ ಸಾಗಿಸದೇ ಸ್ವಾವಲಂಬಿಯಾಗಿ ಬದುಕುವುದು ಅಗತ್ಯವಾಗಿದೆ. ಹೀಗಾಗಿ ಉತ್ತಮ ಆರೋಗ್ಯವನ್ನು ಇಂದು ಹೆಚ್ಚುವರಿ ಸಂಪತ್ತು ಪರಿಗಣಿಸಲಾಗಿದೆ. ಬಿ.ಎಲ್.ಡಿ.ಇ ನಗರ ಆರೋಗ್ಯ ಕೇಂದ್ರದಲ್ಲಿ ಒಂದೇ ಸೂರಿನಡಿ ಆಯುರ್ವೇದ ಮತ್ತು ಅಲೋಪಥಿ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಹೊಸ ಆುಯರ್ವೇದ ಕಾಲೇಜು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೇ, ಅಲ್ಲಿಯೂ ನಗರ ಆರೋಗ್ಯ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಪತ್ರಕರ್ತರ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದ್ದು, ನಮ್ಮ ತಂದೆಯವರ ಕಾಲದಿಂದಲೂ ಉತ್ತಮ ಬಾಂಧವ್ಯವಿದೆ. ಮಾಧ್ಯಮ ಪ್ರತಿನಿಧಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಅನಾರೋಗ್ಯ ಸಮಸ್ಯೆಯಾದಾಗ ಈ ಹೆಲ್ತ್ ಕಾರ್ಡ್ ಉಪಯೋಗವಾಗಲಿದೆ ಎಂದು ಶಾಸಕರು ಹೇಳಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ಕಳೆದ 75 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ತಾಯಿ ಮತ್ತು ಶಿಶು ಮರಣ ಸಂಖ್ಯೆ ಕಡಿಮೆಯಾಗಿದೆ. ಉತ್ತಮ ಆರೋಗ್ಯ ಸೇವೆಗಳಿಂದಾಗಿ ರೋಗಿಗಳಿಗೆ ಅನುಕೂಲವಾಗಿದೆ. ವೈದ್ಯರು ತಮ್ಮ ವೃತ್ತಿಸಂಹಿತೆಯನ್ನು ಪಾಲಿಸುತ್ತ ಗುಣಮಟ್ದ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಸಕಲ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ ಎಂದು ಹೇಳಿದರು.
ಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ನಾನಾ ಕಾಯಿಲೆಗಳಿಂದ ಬಳಲುವವರಿಗೆ ಇಂದು ಅಂಗಾಂಗ ದಾನದ ಮೂಲಕ ಮರುಜೀವ ನೀಡಬಹುದಾಗಿದೆ. ಮೃತ ವ್ಯಕ್ತಿಯ ಒಂದು ನೇತ್ರದಾನ ಮಾಡುವುದರಿಂದ ನಾಲ್ಕು ಜನರ ಬಾಳಿಗೆ ಬೆಳಕು ನೀಡಬಹುದಾಗಿದೆ. ಹೀಗಾಗಿ ಎಲ್ಲರೂ ಅಂಗಾಂಗ ಮತ್ತು ದೇಹದಾನದ ಬಗ್ಗೆ ಜಾಗೃತರಾಗಬೇಕಿದೆ. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸಂಭವನೀಯ ಅನಾರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಹೇಳಿದರು.
ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ ಮಾತನಾಡಿ, ಆಸ್ಪತ್ರೆಯಲ್ಲಿ ನೀಡಲಾಗುವ ಚಿಕಿತ್ಸೆ ಮತ್ತು ಸೌಲಭ್ಯಗಳು, ನಾನಾ ಆರೋಗ್ಯ ವಿಮೆಗಳು ಹಾಗೂ ವಿರಳ ಶಸ್ತ್ರಚಿಕಿತ್ಸೆಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ವ್ಯವಸ್ಥೆ ಮಾಡಲಾಗಿದೆ. ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಹೀಗಾಗಿ ಬಿ.ಎಲ್.ಡಿ.ಇ ಆಸ್ಪತ್ರೆಗೆ ಹೆಚ್ಚೆಚ್ಚು ರೋಗಿಗಳು ಚಕಿತ್ಸೆಗೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಸಂಘದ ಸದಸ್ಯರಿಗೆ ಹೆಲ್ತ್ ಕಾರ್ಡ್ ನೀಡುವುದಾಗಿ ಭರವಸೆ ನೀಡಿದ್ದ ಶಾಸಕ ಸುನೀಲಗೌಡ ಪಾಟೀಲ ಅವರು ಕೆಲವೇ ದಿನಗಳಲ್ಲಿ ಅದನ್ನು ಈಡೇರಿಸುವ ಮೂಲಕ ಪತ್ರಕರ್ತರಿಗೆ ನೆರವಾಗಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸುನೀಲಗೌಡ ಪಾಟೀಲ ಅವರನ್ನು ಬಾಗಲಕೋಟೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಕಾಲೇಜಿನ ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂತೂರ, ಡಾ. ಉಪ ಅಧೀಕ್ಷಕ ಡಾ. ರವಿ ಬಿರಾದಾರ, ಟ್ರಾಮಾ ಸೆಂಟರ್ ಆಡಳಿತಾಧಿಕಾರಿ ಡಾ. ಶರಣಪ್ಪ ಕಟ್ಟಿ, ಆಸ್ಪತ್ರೆಯ ಸ್ಥಳೀಯ ವೈದ್ಯಾಧಿಕಾರಿ ಡಾ. ಅಶೋಕ ತರಡಿ, ಟ್ರಾಮಾ ಸೆಂಟರ್ ತುರ್ತು ಚಿಕಿತ್ಸೆ ಘಟಕದ ಮುಖ್ಯ ವೈದ್ಯಾಧಿಕಾರಿ ಡಾ. ಈರಣ್ಣ ಎಸ್. ಧಾರವಾಡಕರ, ಆಸ್ಪತ್ರೆ ಆಡಳಿತಾಧಿಕಾರಿ ಏಕನಾಥ ಜಾಧವ, ಬಿ.ಎಲ್.ಡಿ.ಇ ಸಂಸ್ಥೆಯ ಮಾಧ್ಯಮ ಸಮನ್ವಯಕಾರ ಮಹೇಶ ವಿ. ಶಟಗಾರ, ಬಾಗಲಕೋಟೆ ಜಿಲ್ಲೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಪದಾಧಿಕಾರಿಗಳು, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ, ಕಾರ್ಯಕ್ರಮದ ಬಳಿಕ ಸುಮಾರು100ಕ್ಕೂ ಹೆಚ್ಚು ಜನ ಬಾಗಲಕೋಟೆ ಜಿಲ್ಲೆಯ ಪತ್ರಕರ್ತರು ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ ಕಾಲೇಜು, ಆಸ್ಪತ್ರಮತ್ತು ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ, ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮತ್ತು ಉಪಪ್ರಾಚಾರ್ಯ ಡಾ. ಶಶಿಧರ ನಾಯಿಕ ಪತ್ರಕರ್ತರಿಗೆ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿರುವ ಸೌಲಭ್ಯಗ ಕುರಿತು ಮಾಹಿತಿ ನೀಡಿ, ವಿದೇಶಗಳಿಂದ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ವತಿಯಿಂದಲೇ ಹಲವಾರು ಆಯುರ್ವೇದ ಔಷಧಿಗಳನ್ನು ತಯಾರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದಾದ ಬಳಿಕ ಬ.ಎಲ್.ಡಿ.ಇ ಆಸ್ಪತ್ರೆಗೆ ಭೇಟಿ ನೀಡಿದ ಪತ್ರಕರ್ತರು ಅಲ್ಲಿ ಲಭ್ಯವಿವರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಹಿಂದೂಸ್ತಾನ್ ಸಮಾಚಾರ್ / jyothi deshpande