
ಬೆಂಗಳೂರು, 12 ಜನವರಿ (ಹಿ.ಸ.) :
ಆ್ಯಂಕರ್ : ಭಾರತ ಬಲಿಷ್ಠವಾಗಿ ಬೆಳೆಯಬೇಕಾದರೆ ಮೊದಲು ಬಡವರಿಗೆ ಹೊಟ್ಟೆ ತುಂಬಾ ಅನ್ನ ಮತ್ತು ಸ್ವತಂತ್ರ ಚಿಂತನೆಗೆ ಅವಕಾಶ ನೀಡುವ ಶಿಕ್ಷಣ ಸಿಗಬೇಕು, ಪುರೋಹಿತಷಾಹಿ ಯಜಮಾನಿಕೆ ಮತ್ತು ಸಾಮಾಜಿಕ ಶೋಷಣೆ ಕೊನೆಗೊಳ್ಳಬೇಕು ಎಂದು ದಿಟ್ಟತನದಿಂದ ಹೇಳಿದವರು ಸ್ವಾಮಿ ವಿವೇಕಾನಂದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಸಂದೇಶ ಹಂಚಿಕೊಂಡಿರುವ ಅವರು, ಭಾರತದಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಚಿಂತನೆಗಳ ಮಿಲನವಾಗಬೇಕು, ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹ - ಇದು ನಮ್ಮ ಮುನ್ನಡೆಗೆ ದಾರಿ ತೋರಬೇಕು ಎಂಬ ದಾರ್ಶನಿಕ ನುಡಿಗಳನ್ನಾಡಿದವರು ಸ್ವಾಮಿ ವಿವೇಕಾನಂದರು.
ರಾಜಕಾರಣಿ ಮತ್ತು ಆಡಳಿತಗಾರನಾಗಿ ನಾನು ಕೈಗೊಳ್ಳುತ್ತಾ ಬಂದ ನೀತಿ-ನಿರ್ಧಾರಗಳಲ್ಲಿ ಹಿಂದೂ ಧರ್ಮದ ಸುಧಾರಕ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರೇರಣೆ ಇದೆ ಎನ್ನುವುದನ್ನು ವಿನೀತನಾಗಿ ಅರಿಕೆ ಮಾಡಿಕೊಳ್ಳುವೆ.
ತಮ್ಮ ಅಲ್ಪಾಯುಷ್ಯದ ಅವಧಿಯ ಪ್ರತಿಯೊಂದು ಗಳಿಗೆಯನ್ನು ಹಿಂದೂ ಧರ್ಮದ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ದಿನ ಅವರನ್ನು ಗೌರವ ಮತ್ತು ಕೃತಜ್ಞತಾ ಭಾವದಿಂದ ನೆನೆಯುವೆ.
ನಾಡಿನ ಜನರೆಲ್ಲರು ವಿವೇಕಾನಂದರ ಚಿಂತನೆಗಳನ್ನು ಅರಿತುಕೊಂಡು ವಿವೇಕವನ್ನು ಬೆಳೆಸಿಕೊಳ್ಳಲಿ ಎಂದು ಹಾರೈಸುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa