
ವಿಜಯಪುರ, 12 ಜನವರಿ (ಹಿ.ಸ.) :
ಆ್ಯಂಕರ್ : ಮಕ್ಕಳು ಶಾಲಾ ಹಂತದಲ್ಲಿಯೇ ವಿಷಯ ಗ್ರಹಿಕೆಗೆ ಪ್ರತಿಯೊಂದನ್ನು ಪ್ರಶ್ನಿಸುವ ಮುಕ್ತ ಅವಕಾಶ ಇರುವುದರಿಂದ ಎಲ್ಲ ಅರಿಯಬೇಕೆಂಬ ಎಂಬ ಕುತೂಹಲಿಗಳಾಗಿರಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ ಕೋಸಂಭೆ ಅವರು ಹೇಳಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಆಯೋಜಿಸಲಾದ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಮಕ್ಕಳು ದೇಶದ ಭವಿಷ್ಯವಾಗಿದ್ದು,ಮಕ್ಕಳಿಗೆ ಸುರಕ್ಷಿತ ಪರಿಸರ, ಗುಣಮಟ್ಟದ ಶಿಕ್ಷಣ, ಆರೋಗ್ಯ ಹಾಗೂ ಗೌರವಯುತ ಜೀವನ ಒದಗಿಸುವುದು ಸಮಾಜದ ಒಟ್ಟಾರೆ ಜವಾಬ್ದಾರಿಯಾಗಿದೆ. ಮಕ್ಕಳ ಮೇಲೆ ನಡೆಯುವ ಯಾವುದೇ ರೀತಿಯ ಶೋಷಣೆ, ನಿರ್ಲಕ್ಷ್ಯ ಮತ್ತು ಹಿಂಸೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.
ಮಕ್ಕಳಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಕಾಲದಲ್ಲಿ ದೊರಕುವಂತೆ ನೋಡಿಕೊಳ್ಳಬೇಕು.ಅದರಂತೆ ಮಕ್ಕಳ ಸುರಕ್ಷತೆ ಅವರ ಭವಿಷ್ಯ ಉಜ್ವಲಗೊಳ್ಳಲು ಹಾಗೂ ಇನ್ನಿತರ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಮಹತ್ವದ ಉದ್ದೇಶ ಆಯೋಗದ ದೂರದೃಷ್ಠಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳ ಸಮಸ್ಯೆಗಳನ್ನು ಆಲಿಸಿ,ಅವರ ಬೇಡಿಕೆಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿಪೂರ್ವಕವಾಗಿ ಆಲಿಸಿ ಪರಿಹರಿಸಬೇಕು. ಯಾವುದೇ ಸಮಸ್ಯೆಗಳಿಗೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದು ಅವರು ಹೇಳಿದರು. ಮಕ್ಕಳ ಅಭಿಪ್ರಾಯಗಳಿಗೆ ಮಹತ್ವ ನೀಡುವಂತಹ ವೇದಿಕೆಗಳು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಎಸ್. ಹಾಗರಗಿ ಅವರು ಮಾತನಾಡಿ, ಮಕ್ಕಳ ರಕ್ಷಣಾ ಕಾಯ್ದೆಗಳು, ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಶಿಕ್ಷಣದ ಮಹತ್ವ ಹಾಗೂ ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ಮಕ್ಕಳೊಂದಿಗೆ ನೇರ ಸಂವಾದ ನಡೆಸಿ ಮಕ್ಕಳ ಪ್ರಶ್ನೆಗಳಿಗೆ ಪರಿಹಾರ ನೀಡುವ ಮೂಲಕ ಅನೇಕ ವಿಷಯಗಳ ಕುರಿತು ತಿಳಿಸಿದರು.,ಈ ಕಾರ್ಯಕ್ರಮವು ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸಲು ಹಾಗೂ ಮಕ್ಕಳ ಹಕ್ಕುಗಳು, ರಕ್ಷಣೆ ಕ್ರಮ ಕೈಗೊಳ್ಳುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಕೆ.ಕೆ ಚವ್ಹಾಣ, ಅಲ್ಪಸಂಖ್ಯಾತರ ಇಲಾಖೆ ಉಪನಿರ್ದೇಶಕರಾದ ಪ್ರಶಾಂತ ಪೂಜಾರಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಟಿ.ಎಸ್ ಕೊಲ್ಹಾರ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರರಾದ ಬಸಮ್ಮ ಹತ್ರಕಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande