ಕೊಪ್ಪಳ, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಾದ್ಯಂತ ಸೆಪ್ಟೆಂಬರ್ 13 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಿಕೊಳ್ಳಲು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ. ಅವರು ತಿಳಿಸಿದ್ದಾರೆ.
ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನಕ್ಕಾಗಿ ಸಿವಿಲ್ ದಾವೆಗಳು, ಭೂ-ಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ರಾಜಿ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ರಾಜಿ ಸಂಧಾನದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಪ್ರಕರಣವು ಇಬ್ಬರಿಗೂ ಒಪ್ಪಿಗೆಯಾಗುವಂತೆ ಕೊನೆಗೊಂಡು ನ್ಯಾಯಾಲಯಕ್ಕೆ ತುಂಬಿದ ನ್ಯಾಯಾಲಯ ಶುಲ್ಕ ಸಂಪೂರ್ಣವಾಗಿ ವಾಪಸ್ ನೀಡಲಾಗುವುದು. ಕಾರಣ ಪಕ್ಷಗಾರರು ಸೆ.13 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗುವ ‘ರಾಷ್ಟ್ರೀಯ ಲೋಕ ಅದಾಲತನಲ್ಲಿ ಭಾಗವಹಿಸಬಹುದು.
ಇದರೊಂದಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ 90 ದಿನಗಳ ಮಧ್ಯಸ್ಥಿಕೆಯ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಮಧ್ಯಸ್ಥಿಕೆಯು ರಾಜಿ ಸಂಧಾನದಲ್ಲಿ ಕಡಿಮೆ ಅವಧಿಯಲ್ಲಿ ಶೀಘ್ರ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಉಭಯ ಪಕ್ಷಗಾರರು ಸಮಯ, ಹಣದ ಉಳಿತಾಯವನ್ನು ಮಾಡಬಹುದಾಗಿದೆ. ರಾಷ್ಟ್ರವ್ಯಾಪಿ ಮಧ್ಯಸ್ಥಿಕೆಯ ಕುರಿತು 90 ದಿನಗಳ ವಿಶೇಷ ಆಂದೋಲನ ಈಗಾಗಲೇ ಜುಲೈ 1 ರಿಂದ ಆರಂಭಗೊಂಡಿದ್ದು, ಅಕ್ಟೋಬರ್ 7 ರವರೆಗೆ ಇರುತ್ತದೆ. ತಟಸ್ಥ ಹೊಂದಿದ ಮಧ್ಯಸ್ಥಿಕೆಗಾರರು ಮಧ್ಯಸ್ಥಿಕೆ ಮಾಡುವ ಮೂಲಕ ವಿವಾದವನ್ನು ಸೃಜನಾತ್ಮಕವಾಗಿ ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ. ಮಧ್ಯಸ್ಥಿಕೆಯು ಸ್ವಪ್ರೇರಿತವಾದುದಲ್ಲದೇ ಗೌಪ್ಯವಾಗಿಯೂ ಇರುತ್ತದೆ ಮತ್ತು ಇದು ಪಾರದರ್ಶಕತೆಯಿಂದ ಕೂಡಿರುತ್ತದೆ. ಕಡಿಮೆ ಕಾಲ ಮಿತಿಯಲ್ಲಿ ಆಪ್ತ ಸಮಾಲೋಚನೆ ಮೂಲಕ ಮಧ್ಯಸ್ಥಿಕೆ ನಡೆಯುವುದರಿಂದ ಅರ್ಥಪೂರ್ಣ ಚರ್ಚೆ ನಡೆದು ಪ್ರಕರಣವು ವ್ಯಾಜ್ಯ ಮುಕ್ತವಾಗಿ ಬಗೆಹರಿಯಲು ಸಹಾಯವಾಗುತ್ತದೆ.
ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ವಿಚ್ಛೇದನ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳನ್ನು ಬಗೆಹರಿಸಬಹುದಾಗಿದೆ. 90 ದಿನಗಳ ವಿಶೇಷ ಮಧ್ಯಸ್ಥಿಕೆಯು ಪ್ರತಿ ದಿನವು ನಡೆಯಲಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ವಕೀಲರು ತಮ್ಮ ಕಕ್ಷಿಗಾರರ ಮನವೊಲಿಸುವ ಮೂಲಕ ಮಧ್ಯಸ್ಥಿಕೆಯ ವಿಶೇಷ ಆಂದೋಲನವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಖಾಯಂ ಜನತಾ ನ್ಯಾಯಾಲಯ ಸೇವೆಯನ್ನು ಸಹ ನೀಡಲಾಗುತ್ತಿದ್ದು, ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ವಿವಾದಗಳ ಅತಿ ಶೀಘ್ರ ಹಾಗೂ ಖರ್ಚಿಲ್ಲದ ತೀರ್ಮಾನಕ್ಕಾಗಿ ಖಾಯಂ ಜನತಾ ನ್ಯಾಯಾಲಯಗಳು ವರವೆಂದೇ ಹೇಳಬಹುದು. 1987ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯನ್ನು 2002ರಲ್ಲಿ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿ, ಸೇರಿಸುವುದರ ಮೂಲಕ ಖಾಯಂ ಜನತಾ ನ್ಯಾಯಾಲಯಗಳನ್ನು ಅಸ್ಥಿತ್ವಕ್ಕೆ ತಂದಿದೆ.
ಆ ಪ್ರಕಾರ, 2007ರಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಿದೆ. 1987ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯ 22ಂ(b) ನೇ ವಿಧಿಯನ್ವಯ ಸಾರ್ವಜನಿಕ ಉಪಯುಕ್ತತಾ ಸೇವೆಗಳ ವ್ಯಾಪ್ತಿಯೊಳಗೆ ಸೇವೆಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರನ್ನು ಅಥವಾ ಸರಕನ್ನು ಸಾಗಿಸುವ ಭೂ-ಸಾರಿಗೆ, ಜಲಸಾರಿಗೆ ಹಾಗೂ ವಾಯುಸಾರಿಗೆ ಸೇವೆ, ಅಂಚೆ, ತಂತಿ ಮತ್ತು ದೂರವಾಣಿ ಸೇವೆ, ವಿದ್ಯುತ್ ಮತ್ತು ನೀರು ಸರಬರಾಜು ಸೇವೆ, ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ ಮತ್ತು ಕನ್ಸರ್‍ವೆನ್ಸಿ, ಆಸ್ಪತ್ರೆ ಮತ್ತು ಔಷಧಾಲಯಗಳಲ್ಲಿನ ಸೇವೆ, ವಿಮಾ ಸೇವೆ, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಸೇವೆಗಳು, ಶಿಕ್ಷಣ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಸೇವೆಗಳು, ಗೃಹ ಅಥವಾ ರಿಯಲ್ ಎಸ್ಟೇಟ್‍ಗಳಿಗೆ ಸಂಬಂಧಪಟ್ಟ ಸೇವೆಗಳು ಹಾಗೂ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಸಾರ್ವಜನಿಕ ಹಿತದೃಷ್ಟಿಯಿಂದ ಸಾರ್ವಜನಿಕ ಉಪಯುಕ್ತತಾ ಸೇವೆ ಎಂದು ಘೋಷಿಸುವ ಇನ್ನಿತರ ಸೇವೆಗಳನ್ನು ಒದಗಿಸಲಾಗುತ್ತದೆ.
ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ವಿವಿಧ ನ್ಯಾಯಾಲಯಗಳ ಆವರಣದಲ್ಲಿ ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಅಥವಾ ನಿಗದಿಪಡಿಸುವ ದಿನಗಳಂದು ಮಾತ್ರವೇ ಲೋಕ್ ಅದಾಲತ್ ಪ್ರಕ್ರಿಯೆಗಳು ನಡೆಯುತ್ತವೆ. ಅಲ್ಲಿ ವಿವಾದಗಳು ರಾಜಿ ಮೂಲಕ ಮಾತ್ರವೇ ತೀರ್ಮಾನವಾಗಬೇಕಾಗುತ್ತದೆ. ಆ ರೀತಿ ರಾಜಿ ಮೂಲಕ ತೀರ್ಮಾನವಾಗದಿದ್ದರೆ, ಆ ವಿವಾದಗಳು ಪುನಃ ನ್ಯಾಯಾಲಯಕ್ಕೆ ವಾಪಸ್ಸು ಹೋಗಿ, ಅಲ್ಲಿನ ಪ್ರಕ್ರಿಯೆಯಂತೆ ತೀರ್ಮಾನಕ್ಕೆ ಒಳಪಡಬೇಕಾಗುತ್ತದೆ. ಆದ್ದರಿಂದ, ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುವುದು ಸಹಜ. ಆದರೆ, ಖಾಯಂ ಜನತಾ ನ್ಯಾಯಾಲಯವು ಬೇರೆ ನ್ಯಾಯಾಲಯಗಳಂತೆ ಪ್ರತಿದಿನ ಕಾರ್ಯನಿರ್ವಹಿಸುತ್ತಿದ್ದು, ರಾಜಿ ಸಂಧಾನ ಪ್ರಕ್ರಿಯೆ ಪ್ರತಿದಿನ ನಡೆಯುತ್ತದೆ. ಪಕ್ಷಗಾರರು ಇಚ್ಛೆ ಪಟ್ಟಲ್ಲಿ ಅವರು ಬಯಸಿದ ದಿನಗಳಂದೇ ರಾಜಿ ಸಂಧಾನ ಪ್ರಕ್ರಿಯೆ ಅಥವಾ ವಿಚಾರಣಾ ತೀರ್ಮಾನ ನಡೆಸಬಹುದಾಗಿದೆ. ಒಂದು ವೇಳೆ, ವಿವಾದಗಳು ರಾಜಿ ಮೂಲಕ ತೀರ್ಮಾನವಾಗದಿದ್ದರೆ, ಖಾಯಂ ಜನತಾ ನ್ಯಾಯಾಲಯವೇ ಆ ವಿವಾದಗಳನ್ನು ಅರ್ಹತೆಯ ಆಧಾರದ ಮೇಲೆ ತೀರ್ಮಾನಿಸಬಹುದು. ಈ ರೀತಿಯ ಅಧಿಕಾರ ಮೇಲೆ ಉಲ್ಲೇಖಿಸಿದ ಲೋಕ್ ಅದಾಲತ್ತಿಗೆ ಇರುವುದಿಲ್ಲ. ಆದ್ದರಿಂದ, ಸಾರ್ವಜನಿಕ ಉಪಯುಕ್ತತಾ ಸೇವೆಗಳಿಗೆ ಸಂಬಂಧಿಸಿದಂತೆ ವಿವಾದಗಳನ್ನು ಖಾಯಂ ಜನತಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವುದು ಅತ್ಯುತ್ತಮವೆನಿಸುತ್ತದೆ.
ಖಾಯಂ ಜನತಾ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ನಿಯಮಕ್ಕನುಸಾರ ನಡೆದರೆ, ಅತಿ ಶೀಘ್ರವಾಗಿ ಹಾಗೂ ಖರ್ಚಿಲ್ಲದೆ ಪರಿಹಾರ ಪಡೆಯಲು ಸಾಧ್ಯವಿದ್ದು, ಸಾರ್ವಜನಿಕರು ಹಾಗೂ ಸಾರ್ವಜನಿಕ ಉಪಯುಕ್ತತಾ ಸೇವೆಯ ಸಂಸ್ಥೆಗಳು ಅದರ ಸದುಪಯೋಗ ಪಡೆಯಬಹುದಾಗಿದೆ. ವಕೀಲರು ಸಹ ಈ ಖಾಯಂ ಜನತಾ ನ್ಯಾಯಾಲಯದ ವೇದಿಕೆಯನ್ನು ಉಪಯೋಗಿಸಿಕೊಂಡು ತಮ್ಮ ಕಕ್ಷಿಗಾರರಿಗೆ ಖರ್ಚಿಲ್ಲದೆ ಶೀಘ್ರವಾಗಿ ಪರಿಹಾರವನ್ನು ಕೊಡಿಸಬಹುದಾಗಿದೆ.
ಸರ್ಕಾರದ ಆದೇಶದನ್ವಯ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಾಖಲಾದ ಪ್ರಕರಣಗಳಿಗೆ ಅನ್ವಯವಾಗುವಂತೆ ಸಂಚಾರಿ ಇ-ಚಲನ್‍ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯತಿಯನ್ನು ನೀಡಲಾಗಿದೆ. ಈ ರಿಯಾಯತಿಯು ಸೆಪ್ಟೆಂಬರ್ 12 ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ. ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ಆವರಣ, ಕೊಪ್ಪಳ, ದೂರವಾಣಿ: 08539-220233 ಇಲ್ಲಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್