ಬಳ್ಳಾರಿ, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಹನುಮಂತ ಕುಂಬಾರ ಎಂಬ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ)ದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ದಂಡ ಸಹಿತ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಕುಷ್ಟಗಿ ತಾಲ್ಲೂಕಿನ ಪರಮನಹಟ್ಟಿಯ ಹನುಮಂತ ಕುಂಬಾರ ಎಂಬ ವ್ಯಕ್ತಿಯು ಪರಿಶಿಷ್ಟ ಜಾತಿಗೆ ಸೇರಿದ ಬಾಧಿತಳನ್ನು ಪರಿಚಯಿಸಿಕೊಂಡು, ಸಲಿಗೆ ಬೆಳೆಸಿ ಪ್ರೀತಿಸುತ್ತಿರುವುದಾಗಿ ಹಾಗೂ ಮದುವೆಯಾಗುವುದಾಗಿ ಹೇಳಿದ್ದನು. ಬಾಧಿತಳು ತಾನಿನ್ನೂ ಚಿಕ್ಕವಳು ಎಂದು ಆರೋಪಿಯ ಪ್ರಸ್ತಾವನೆಯನ್ನು ನಿರಾಕರಿಸಿದ್ದಳು. ಆದರೂ ಮದುವೆಯಾಗುವುದಾಗಿ ಪುಸಲಾಯಿಸಿ ದಿನಾಂಕ: 10-05-2023 ರಿಂದ ಹಲವಾರು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ, ದಿನಾಂಕ: 31-07-2023 ರಂದು ಬಾಧಿತಳ ಮನೆಯಿಂದ ಆಕೆಯನ್ನು ತನ್ನ ಮೊಟಾರ್ ಬೈಕ್‌ನಲ್ಲಿ ತನ್ನ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿ 2 ದಿನ ತಂಗಿದ್ದು, ಅಲ್ಲಿಂದ ಬೈಕ್ ಮೇಲೆ ಬೆಂಗಳೂರಿಗೆ ತೆರಳಿ, ಬೆಂಗಳೂರಿನ ರಾಜಾಕುಂಟೆ ಗ್ರಾಮದ ಪಟ್ಟಾಲು ದೇವಸ್ಥಾನದ ಹತ್ತಿರ ಪತ್ತೆಯಾಗಿರುತ್ತಾರೆ.
ಆರೋಪಿಯು ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಹಿನ್ನೆಲೆಯಲ್ಲಿ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸ್ಪೇ.ಎಸ್‌ಸಿ(ಪೋಕ್ಸೋ) ಸಂ:53/2023 ರಡಿ ಪ್ರಕರಣ ದಾಖಲಾಗಿತ್ತು. ಬೇವೂರು ಠಾಣೆ ಪಿಎಸ್‌ಐ ಪ್ರಶಾಂತ ಎಚ್.ಎಸ್. ಅವರು ದೂರು ಸ್ವೀಕರಿಸಿ ಪ್ರಥಮ ಹಂತದ ತನಿಖೆ ನಿರ್ವಹಿಸಿದ್ದರು. ಮುಂದಿನ ಹಂತದ ತನಿಖೆಯನ್ನು ಕೊಪ್ಪಳ ಡಿಎಸ್‌ಪಿ ಶರಣಬಸಪ್ಪ ಸುಬೇದಾರ ಅವರು ನಿರ್ವಹಿಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಡಿಎಸ್‌ಪಿ ಕಚೇರಿಯ ಸಿಎಚ್‌ಸಿ ಶಿವಕುಮಾರ ಅವರು ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿತನ ಮೇಲಿನ ಆರೋಪಗಳು ಸಾಬೀತಾದ್ದರಿಂದ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.30,000/- ಗಳ ದಂಡವನ್ನು ಭರಿಸುವಂತೆ ಹಾಗೂ ಸರ್ಕಾರದಿಂದ ರೂ.6,00,000/- ಗಳ ಪರಿಹಾರವನ್ನು ನೀಡಲು ಆದೇಶಿಸಿ ಸೆಪ್ಟೆಂಬರ್ 8 ರಂದು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಅಪರ್ಣ ಬಂಡಿ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾದ(ಪೋಕ್ಸೋ) ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು. ಬೇವೂರು ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ ಇವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದರು ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರು(ಪೋಕ್ಸೋ) ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್