ಬೆಂಗಳೂರು, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಮತ್ತು ಲಾಠಿ ಪ್ರಹಾರ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ನಡೆದ ಘಟನೆ ಹೇಯಕೃತ್ಯ. ಕಲ್ಲೆಸೆತಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿದೆ. ಇದು ಸರ್ಕಾರದ ಬೆಂಬಲವಿಲ್ಲದೇ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ನಾವು ಕರ್ನಾಟಕದಲ್ಲಿದ್ದೇವೋ, ಪಾಕಿಸ್ತಾನದಲ್ಲಿದ್ದೇವೋ ಎಂಬ ಭ್ರಮೆ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ರಸ್ತೆಯಲ್ಲಿ ಗಣಪತಿ ವಿಸರ್ಜನೆ ನಡೆಯುತ್ತಿತ್ತು. ಅದನ್ನು ತಡೆಯುವ ಹಕ್ಕು ಸರ್ಕಾರಕ್ಕಿಲ್ಲ. ಲಾಠಿ ಪ್ರಹಾರ ಮಾಡಿರುವುದು ಹಿಂದೂಗಳ ಮೇಲಷ್ಟೇ. ಕಲ್ಲು ಎಸೆದವರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ದುಷ್ಕರ್ಮಿಗಳನ್ನು ಬಿಟ್ಟು ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ . ಮದ್ದೂರು ಘಟನೆಯ ಜವಾಬ್ದಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಮೇಲೆ ಇದೆ. ಇಬ್ಬರೂ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ವಿಧಾನ ಸೌಧದಲ್ಲಿಯೇ ಪಾಕಿಸ್ತಾನ ಪರ ಕೂಗು ಕೇಳಿ ಬಂದ ನಂತರವೂ ಸರ್ಕಾರ ಮೌನವಾಗಿರುವುದನ್ನು ಆರ್. ಅಶೋಕ್ ತೀವ್ರವಾಗಿ ಖಂಡಿಸಿ, ಇಂದೀಗ ಮಂಡ್ಯ, ಮೈಸೂರಿನಲ್ಲಿ ಸಹ ಗಲಭೆಗಳನ್ನು ಮಾಡಲಾಗಿದೆ. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಮುಂದಿನ ವರ್ಷ ಗಣಪತಿ ಹಬ್ಬವನ್ನೇ ನಿಷೇಧಿಸುವ ಸ್ಥಿತಿ ಬರಬಹುದು ಎಂದು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa