ಧಾರವಾಡ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯಲ್ಲಿ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಸೇರಿ ಸುಮಾರು 93,496.98 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಜಂಟಿ ಸಮಿತಿ ಮೂಲಕ ಸಮೀಕ್ಷೆ ಮಾಡಿ, ನಿನ್ನೆಯೇ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದತ್ತಾಂಶಗಳನ್ನು ದಾಖಲಿಸಲು ವೆಬ್‍ಸೈಟ್ ಓಪನ್ ಮಾಡಿ, ಪರಿಹಾರ ಬಿಡುಗಡೆಗೆ ತಕ್ಷಣ ಕ್ರಮವಹಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಮುಖ್ಯಮಂತ್ರಿಗಳ ಜೊತೆಗೆ ಧಾರವಾಡ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿ, 2025 ರ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿಯಿಂದ ಆದ ಹಾನಿಗಳ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಜರುಗಿದ ವಿಡಿಯೋ ಕಾನ್ಫರೆನ್ಸ್‍ದಲ್ಲಿ ಮಾತನಾಡಿದರು.
ರಾಜ್ಯದಲ್ಲಿಯೇ ಮೊದಲನೆಯದಾಗಿ ಧಾರವಾಡ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಹಾನಿಯನ್ನು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳ ತಂಡದಿಂದ ಜಂಟಿ ಸಮೀಕ್ಷೆಯನ್ನು ಪೂರೈಸಿದೆ. ಅಲ್ಲದೇ ಸಮೀಕ್ಷೆಯ ಅಂತಿಮ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯೊಂದಿಗೆ ಧಾರವಾಡ ಜಿಲ್ಲಾಡಳಿತವು ಸಲ್ಲಿಸಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಪರಿಶೀಲಿಸಿ, ರೈತರಿಗೆ ಅನುಕೂಲವಾಗುವಂತೆ ತಕ್ಷಣ ಪರಿಹಾರ ಬಿಡುಗಡೆ ಮಾಡಲು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವಿನಂತಿಸಿದರು.
ಧಾರವಾಡ ಜಿಲ್ಲಾಧಿಕಾರಿಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಆಗಿರುವ ಮೂಲಭೂತ ಸೌಕರ್ಯಗಳ ಹಾನಿ ಬಗ್ಗೆ ಪರಿಶೀಲಿಸಿ, ದುರಸ್ತಿಗೆ ಆದೇಶಿಸಿದ್ದಾರೆ. ಈ ಕುರಿತು ಅನುದಾನ ಬಿಡುಗಡೆ ಮಾಡಲು ಸಚಿವರು ಮುಖ್ಯಮಂತ್ರಿಗಳಲ್ಲಿ ಕೋರಿದರು.
ಪೂರ್ವ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಬೆಳೆಗಳ ಫಸಲು ಕೊಯ್ಲಿಗೆ ಬಂದಾಗ ಮತ್ತು ಮುಂಗಾರಿನಲ್ಲಿ ಬಿತ್ತಿದ್ದ ಬೆಳೆಗಳು ಫಸಲು ಬಿಡುವ ಹಂತದಲ್ಲಿದ್ದಾಗ ಜಿಲ್ಲೆಯಲ್ಲಿ ನಿರಂತರವಾಗಿ ಮತ್ತು ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ತಾವು ಸಹ ಬೆಳೆ ಹಾನಿ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿ ರೈತರೊಂದಿಗೆ ಸಂವಾದ ಮಾಡಿದ್ದು, ರೈತರು ಕಷ್ಟದಲ್ಲಿದ್ದಾರೆ. ಅವರಿಗೆ ನಿಯಮಾನುಸಾರ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಲ್ಲಿ ಸಚಿವ ಲಾಡ್ ಅವರು ವಿನಂತಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಆಗಿರುವ ಬೆಳೆ ಹಾನಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬೆಳೆ ಹಾನಿ ಮಾಹಿತಿ ದಾಖಲಿಸಲು ವೆಬ್‍ಸೈಟ್ ಓಪನ್ ಮಾಡಿದರೆ, ದತ್ತಾಂಶ ದಾಖಲಿಸುವದನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಪಿಡಿ ಖಾತೆ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರ ಪಿಡಿ ಖಾತೆಯಲ್ಲಿ 2713.05 ಲಕ್ಷ ರೂ.ಗಳ ಅನುದಾನ ಲಭ್ಯವಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa