ರಾಯಚೂರು, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ವಿವಿಧ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಸೆಪ್ಟೆಂಬರ್ 08ರಂದು ನಗರದ ಜಿಲ್ಲಾ ಪಂಚಾಯಿತಿಯ ಜಲ ನಿರ್ಮಲ ಸಭಾಂಗಣದಲ್ಲಿ ನಡೆಯಿತು.
ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳು ಸಮರ್ಪಕ ಅನುಷ್ಠಾನದ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರು ಸಮಗ್ರ ಪರಿಶೀಲಿಸಿದರು.
ಸಾರಿಗೆ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಬೇಡಿಕೆಗನುಸಾರ ಮಾರ್ಗಗಳ ಹೊಂದಾಣಿಕೆ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ, ಗೃಹಜ್ಯೋತಿ ಯೋಜನೆ ಪ್ರಗತಿ ಕುರಿತು ಚರ್ಚಿಸಲಾಯಿತು. ಜನತೆಗೆ ಈ ಯೋಜನೆಯ ಮಾಹಿತಿ ಕೊರತೆಯಿದ್ದು, ಜಾಗೃತಿ ಕಾರ್ಯಕ್ರಮ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಗೃಹಲಕ್ಷ್ಮಿಯ ಎಲ್ಲ ಅರ್ಹ ಫಲಾನುಭವಿಗಳಿಗೆ ಕಾಲಕಾಲಕ್ಕೆ 2 ಸಾವಿರ ರೂ. ಜಮೆ ಮಾಡಬೇಕು. ತಾಂತ್ರಿಕ ತೊಂದರೆ ಕಂಡುಬAದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಹಂತಹ0ತವಾಗಿ ಸರಿಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ಯುವನಿಧಿ ಯೋಜನೆಗೆ ವಿದ್ಯಾರ್ಥಿಗಳ ನೋಂದಣಿಗಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಭಿಯಾನ ಕೈಗೊಂಡು ನೋಂದಣಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ ಅವರು ಸಭೆಗೆ ಮಾಹಿತಿ ನೀಡಿದರು.
ಸರ್ಕಾರ ಜಾರಿ ತಂದಿರುವ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಸಮಿತಿಯ ಎಲ್ಲಾ ಸದಸ್ಯರ ಪಾತ್ರವು ಸಹ ಇದ್ದು ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಈ ಯೋಜನೆಗಳ ಅನುಷ್ಠಾನದಿಂದ ಸಾರ್ವಜನಿಕರಿಗೆ ಅನುಕೂಲವಾದ ಯಶೋಗಾಥೆಗಳ ಬಗ್ಗೆ ತಿಳಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ ಅವರು ಸಲಹೆ ಮಾಡಿದರು.
ಗ್ಯಾರಂಟಿ ಶಿಬಿರ ನಡೆಸಲು ಸೂಚನೆ: ರಾಜ್ಯದ ಜನರನ್ನು ಸಾಮಾಜಿಕವಾಗಿ ಸದೃಢಗೊಳಿಸಲು ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಜಾರಿ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬ0ಧ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲು ಜಿಲ್ಲೆಯ ತಾಲೂಕುಗಳಲ್ಲಿ ಗ್ಯಾರಂಟಿ ಯೋಜನಗಳ ಶಿಬಿರ ಕಾರ್ಯಕ್ರಮ ಏರ್ಪಡಿಸಿ ಫಲಾನುಭವಿಗಳೊಂದಿಗೆ ಮುಕ್ತ ಸಂವಾದ ನಡೆಸಬೇಕು. ಯೋಜನೆಗಳ ಪ್ರಯೋಜನೆ ಪಡೆಯುವಲ್ಲಿ ಏನಾದರು ತೊಂದರೆಗಳಿದ್ದಲ್ಲಿ ತಕ್ಷಣ ಸ್ಪಂದಿಸುವ ಕುರಿತು ಚರ್ಚೆ ನಡೆಸಲು ಕ್ರಮವಹಿಸಬೇಕು ಎಂದು ಪಾಮಯ್ಯ ಮುರಾರಿ ಅವರು ಸಲಹೆ ಮಾಡಿದರು.
ಯೋಜನೆಗಳ ಪ್ರಗತಿ: 2025ರ ಫೆಬ್ರವರಿ ಮಾಹೆಯಿಂದ ಜಿಲ್ಲೆಯ ಪಡಿತರ ಚೀಟಿದಾರರಿಗೆ ಹಣದ ಬದಲು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ 2025ರ ಜೂನ್ ತಿಂಗಳವರೆಗೆ 4,46,138 ಫಲಾನುಭವಿಗಳು ನೋಂದಾಯಿಸಿಕೊ0ಡಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,42,276 ಫಲಾನುಭವಿಗಳಿಗೆ 335.11 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 379.00 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು 1,20,455 ಪದವಿ ಹಾಗೂ 1083 ಡಿಪ್ಲೋಮಾ ಪೂರ್ಣಗೊಳಿಸಿದ ನೋಂದಾಯಿತ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಆಯಾ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಜಿಲ್ಲಾಮಟ್ಟದ ಉಪಾಧ್ಯಕ್ಷರಾದ ನಾಗೇಂದ್ರ, ಗಫೂರ್ ಸಾಬ್, ಹನುಮಂತ ಜಾಲಿಬೇಂಚಿ, ಶೇಖರ್ ಗೌಡ ತುರುವಿಹಾಳ, ಸದಸ್ಯರಾದ ಎಚ್.ಪಿ ಬಸವರಾಜ ಬಿ, ಕೆ.ಅಮರೇಶ, ಪವನ ಪಾಟೀಲ್, ಲಕ್ಷ್ಮಣ ಜ್ಯೋತಿ, ಮಹೆಬೂಬ್ ಸಾಬ್, ವೆಂಕಟರಾವ್, ಜಾಫರ್ ಅಲಿ, ವೆಂಕಟೇಶ್, ಎಚ್.ಬಸವರಾಜ ಗೋನವಾರ, ಶೇಖರಪ್ಪ ಯಾದವ್, ನಜೀರ ಪಂಜಾಬಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಡಾ.ಟಿ.ರೋಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್, ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ಮುಖ್ಯಸ್ಥರಾದ ಪಾಂಡಪ್ಪ ಲಂಬಾಣಿ, ಜೆಸ್ಕಾಂ ಇಲಾಖೆಯ ಚಂದ್ರಶೇಖರ ದೇಸಾಯಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪ ನಿರ್ದೇಶಕರಾದ ನಜೀರ್ ಅಹಮದ್, ಜಿಲ್ಲಾ ಉದ್ಯೋಗಾಧಿಕಾರಿಗಳಾದ ನವೀನಕುಮಾರ್ ಸಂಗೇಪಾಗ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ ಎಂ.ಎಸ್ ಸೇರಿದಂತೆ ತಾಲೂಕು ಪಂಚಾಯತ್ ಇಒಗಳು, ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್