ಮದ್ದೂರು ಗಲಭೆ ತಡೆಯುವ ಯೋಗ್ಯತೆ ಸರಕಾರಕ್ಕೆ ಇಲ್ಲ : ಜೋಶಿ
ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆಗೆ ಮಸೀದಿ ಮೇಲ್ಗಡೆಯಿಂದ ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ʼಗಲಭೆ ತಡೆಗಟ್ಟುವ ಯೋಗ್ಯತೆಯೇ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕಿಲ್ಲʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶ
ಮದ್ದೂರು ಗಲಭೆ ತಡೆಯುವ ಯೋಗ್ಯತೆ ಸರಕಾರಕ್ಕೆ ಇಲ್ಲ : ಜೋಶಿ


ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆಗೆ ಮಸೀದಿ ಮೇಲ್ಗಡೆಯಿಂದ ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ʼಗಲಭೆ ತಡೆಗಟ್ಟುವ ಯೋಗ್ಯತೆಯೇ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕಿಲ್ಲʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.

ದೆಹಲಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹಿಂದಿನ ಗಲಭೆ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಕೊಡುವ ರೀತಿ ನಡೆದುಕೊಂಡಿದ್ದರಿಂದಲೇ ಇಂಥ ಕೃತ್ಯಗಳು ಮರುಕಳಿಸಲು ಕಾರಣ ಎಂದು ಆರೋಪಿಸಿದರು.

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿಲ್ಲ. ಹಾಗಾಗಿಯೇ ಕಲ್ಲು ತೂರಾಟ ನಡೆದಿದೆ. ಇನ್ನು, ಸೋಮವಾರ ಬೆಳಗ್ಗೆ ಗಣೇಶ ವಿಸರ್ಜನೆಗೆ ಮುಂದಾದ ಅಮಾಯಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೆಲ್ಲಾ ಸರ್ಕಾರದ ಹಿಂದೂ ವಿರೋಧಿ ಮಾನಸಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಖಂಡಿಸಿದರು.

ಹಿಂದೂ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳುವ ಹಾಗೂ ಗಲಭೆ ತಡೆಯಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಯೋಗ್ಯತೆ ಇಲ್ಲದ ಈ ಸರ್ಕಾರ ಅಮಾಯಕರ ಮೇಲೆ, ಗಣೇಶ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಪೊಲೀಸ್‌ ಠಾಣೆ ಸುಟ್ಟು, ಪೊಲೀಸರನ್ನೇ ಕೊಲ್ಲಲು ಪ್ರಯತ್ನಿಸಿದಂತಹ ಪ್ರಕರಣವನ್ನೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂಪಡೆದಿದೆ. ಕೋಮು ಗಲಭೆಯಲ್ಲಿ PFI ಲಿಂಕ್‌ ಇರುವ ಅನೇಕ ಪ್ರಕರಣಗಳನ್ನು ಹಿಂಪಡೆದಿದೆ. ಹೀಗಾಗಿ ಮತಾಂಧ ಕಿಡಿಗೇಡಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ. ಕಾಂಗ್ರೆಸ್‌ ಸರ್ಕಾರ ಒಂದು ಸಮುದಾಯದ ಓಲೈಕೆಗಿಳಿದ ಪ್ರತಿಫಲವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಜೋಶಿ ಹರಿಹಾಯ್ದರು.

ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ನಾವೇನೇ ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಒಂದು ವರ್ಗದಲ್ಲಿ ಮೂಡಿದೆ. ಹಾಗಾಗಿ ಕಿಡಿಗೇಡಿಗಳು ಇಂಥ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಸರ್ಕಾರ ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ, ಪ್ರಕರಣ ಹಿಂಪಡೆಯುವುದು ಮತ್ತು ಅದಕ್ಕೆ ಪ್ರೋತ್ಸಾಹಕ ರೀತಿ ನಡೆದುಕೊಳ್ಳುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೂಗಳಿಗೆ, ಅಮಾಯಕರಿಗೆ, ಜನಸಾಮಾನ್ಯರಿಗೆ ಅನಗತ್ಯ ತೊಂದರೆ ಕೊಡುವುದು, ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಹಿಂದೂಗಳ ವಿರೋಧದ ನಡುವೆಯೂ ಬಾನು ಮುಷ್ತಾಕ್‌ ಅವರನ್ನೇ ಉದ್ಘಾಟನೆಗೆ ಕರೆದಿದ್ದು ಹಾಗೂ ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡ ರೀತಿ ಇವೆಲ್ಲಾ ಮತಾಂಧ ಕ್ರಿಮಿನಲ್‌ಗಳಿಗೆ ಪ್ರೋತ್ಸಾಹ ಕೊಟ್ಟಂತಾಗಿದೆ ಎಂದು ಜೋಶಿ ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿಯಿಂದಾಗಿ ರಾಜ್ಯದಲ್ಲಿ ಕಾನೂನು‌ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಖಂಡಿಸಿದ ಸಚಿವರು, ಮದ್ದೂರಿನಲ್ಲಿ ಪೊಲೀಸರು ಅನಗತ್ಯವಾಗಿ ಗಣೇಶ ಭಕ್ತರಿಗೆ ತೊಂದರೆ ಕೊಡುವ ಕೆಲಸ ಮಾಡಿದರೆ ಅಲ್ಲಿಯೇ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ರೈತರು, ಹಿಂದೂಪರ ಹೋರಾಟಗಾರರು ಹಾಗೂ ಅಮಾಯಕ ಅಧಿಕಾರಿಗಳ ಮೇಲೆ ದರ್ಪ ತೋರುತ್ತದೆ. ಆದರೆ, ಗಣೇಶ ಹಬ್ಬ ಹಾಗೂ ಹಿಂದೂಗಳ ಹಬ್ಬದ ಆಚರಣೆ ವೇಳೆ ಕಾಲು ಕೆದರಿಕೊಂಡು ಬರುವ ಆ ಒಂದು ಸಮುದಾಯದ ಮೇಲೇಕೆ ದರ್ಪ ತೋರುವುದಿಲ್ಲ ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

ಈ ಸರ್ಕಾರ ರೈತರು ಬೆಳೆಹಾನಿ ಪರಿಹಾರ ಕೇಳಿದರೆ, ನ್ಯಾಯಯುತ ಬಲೆ ಕೇಳಿದರೆ ರೈತರ ಮೇಲೆ ದರ್ಪ ಮೆರೆಯುತ್ತದೆ. ಅಧಿಕಾರಿಗಳನ್ನೂ ಅವಮಾನದಿಂದ ನಡೆಸಿಕೊಳ್ಳುತ್ತದೆ. ಆದರೆ, ಕೋಮು ಗಲಭೆಗಳಲ್ಲಿ ಕಲ್ಲು ತೂರುವ ಕಿಡಿಗೇಡಿಗಳ ಮೇಲೆ ಮಾತ್ರ ನಯ-ನಾಜೂಕುತನ ಪ್ರದರ್ಶಿಸುತ್ತದೆ ಎಂದು ಸಚಿವ ಜೋಶಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande