ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇತ್ತೀಚಿಗೆ ಸುರಿದ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಜಂಟಿ ಸಮೀಕ್ಷೆ ವರದಿಯನ್ನು ಪ್ರಕಟಿಸಿ, ರೈತರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅಂತಿಮ ವರದಿ ವಿಂಗಡಿಸಿ ಸಲ್ಲಿಸುವಂತೆ ಸಂಬಂಧಿಸಿದ ತಾಲೂಕಾ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ 13 ತಾಲೂಕುಗಳಲ್ಲಿ ಹಾನಿಗೊಳಗಾದ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿದ್ದು, 21683.9 ಹೆಕ್ಟೇರ್ ಕೃಷಿ ಹಾಗೂ 450 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸಮೀಕ್ಷಾ ವರದಿಯನ್ನು ಜಿಲ್ಲೆಯ ಸಂಬಂಧಿಸಿದ ಗ್ರಾಮ ಪಂಚಾಯತ್ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರ, ತಹಶೀಲ್ದಾರ ಕಾರ್ಯಾಲಯಗಳಲ್ಲಿ ಹಾನಿಗೊಳಗಾದ ರೈತರ ಬೆಳೆಗಳ ಪಟ್ಟಿಯನ್ನು ಪ್ರಚುರಪಡಿಸಿ ರೈತರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ವರದಿಯನ್ನು ವಿಂಗಡಿಸಿ ಅಂತಿಮ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯ 13 ತಾಲೂಕಿನ ತಹಶೀಲ್ದಾರಗಳು ಸರ್ಕಾರದ ನಿರ್ದೇಶನದಂತೆ ತಮ್ಮ ತಾಲೂಕಿನಲ್ಲಿ ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧಡೆ ಪ್ರಚುರಪಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಎಲ್ಲ ತಹಶೀಲ್ದಾರಗಳು ಈಗಾಗಲೇ ಹಾನಿಯಾದ ಭಾಗಶಃ ಮನೆ, ಕಚ್ಚಾ ಮನೆಗಳಿಗೆ ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಮಳೆ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ರಸ್ತೆಗಳ ಸಂಪರ್ಕ ಕಡಿಗೊಂಡಲ್ಲಿ ತಕ್ಷಣ ಸ್ಪಂದಿಸಿ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು. ತಾಲೂಕಿನ ನೋಡಲ್ ಅಧಿಕಾರಿಗಳು ತಾಲೂಕಿನ ಸಮಗ್ರ ಮಾಹಿತಿ ಹೊಂದಿ, ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಂಚಿತವಾಗಿಯೇ ಸಭೆಗಳನ್ನು ನಡೆಸಿ, ಸೂಕ್ತ ತಿಳುವಳಿಕೆ ಮೂಡಿಸಬೇಕು. ಜಿಲ್ಲೆಯಾದ್ಯಂತ ವಿಫಲವಾಗಿರುವ ಕೊಳವೆ ಬಾವಿಗಳಿದ್ದಲ್ಲಿ ಕೂಡಲೇ ಮುಚ್ಚಲು ಕ್ರಮ ವಹಿಸಬೇಕು. ಯಾವುದೇ ಅನಾಹುತಕ್ಕೆ ಅವಕಾಶ ನೀಡದೇ ಸಮರ್ಪಕವಾಗಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಆಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿದ್ಯಾಧರ ನ್ಯಾಮಗೊಂಡ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ ಭಾವಿದೊಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande