ಕೊಪ್ಪಳ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಗುರುತಿಸಬೇಕು ಹಾಗೂ ಅವುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಅವರು ಸೋಮವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಳಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಮೊದಲನೇ ಹಂತದಲ್ಲಿ ಮಂಜೂರಾಗಿರುವ ಹಾಗೂ ಎರಡನೇ ಹಂತದಲ್ಲಿ ಅನುಮೋದನೆಯಾಗಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 93 ಎಕರೆ 15 ಗುಂಟೆ ಭೂಸ್ವಾಧೀನಪಡಿಸಿಕೊಳ್ಳಲು ಮರು ಪ್ರಸ್ತಾವನೆ ಸಲ್ಲಿಸಿ. ಅಂಜನಾದ್ರಿ ಬೆಟ್ಟದಲ್ಲಿ ಮೊದಲನೇ ಹಂತದಲ್ಲಿ ಮಂಜೂರಾಗಿರುವ ಹಾಗೂ ಎರಡನೇ ಹಂತದಲ್ಲಿ ಅನುಮೋದನೆಯಾಗಿರುವ ಅಂಜನಾದ್ರಿ ಬೆಟ್ಟದ ಮುಂದೆ ಥೀಮ್ ಆಧಾರಿತ ಮೆಟ್ಟಿಲುಗಳ ನಿರ್ಮಾಣ ಮತ್ತು ಬೆಟ್ಟದ ಹಿಂದುಗಡೆ ಥೀಮ್ ಆಧಾರಿತ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ, ಪ್ರದಕ್ಷಣಾ ಪಥ ಹಾಗೂ ರೋಪವೇ ಸೇರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಗತ್ಯವಾಗಿರುವ ಅರಣ್ಯ ಪ್ರದೇಶದ ಜಮೀನಿಗೆ ಸಂಬ0ಧಿಸಿದ0ತೆ ( Parivesh 2.0 ) ವೆಬ್‌ಸೈಟಿನಲ್ಲಿ ಅರ್ಜಿ ಸಲ್ಲಿಸಿ ನಿರಾಕ್ಷೇಪಣಾ ಪತ್ರ ಪಡೆಯುವ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಅವಶ್ಯವಿರುವ ಒಟ್ಟು 7 ಎಕರೆ ಅರಣ್ಯ ಜಮೀನಿನ ನಿರಾಕ್ಷೇಪಣಾ ಪ್ರಮಾಣ ಪತ್ರ ( NOC ) ಪಡೆಯಲು ಕ್ರಮ ಕೈಗೊಳ್ಳಬೇಕು. ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸಮಗ್ರ ಅಭಿವೃದ್ಧಿಗಾಗಿ ರೂ. 200 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಮೊದಲನೇ ಹಂತ ಹಾಗೂ ಎರಡನೇ ಹಂತದ ಕಾಮಗಾರಿಗಳು ಹಾಗೂ ರೋಪ್ ವೇ (ಪಿಪಿಪಿ ಮಾದರಿ) ಸೇರಿದಂತೆ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಸ್ಟಡಿ ( Heritage Impact Assessment Study ) ಅಂತಿಮ ವರದಿಯನ್ನು ತಯಾರಿಸುವಂತೆ ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ನಗರದ ಜವಾಹರ್
ರಸ್ತೆಯಲ್ಲಿರುವ ಹಳೆ ಎಸಿ ಕಛೇರಿ ಕಟ್ಟಡದಲ್ಲಿ ವಸ್ತು ಸಂಗ್ರಾಹಾಲಯ ಸ್ಥಾಪಿಸಲು ಹಾಗೂ ಕೊಪ್ಪಳ ಕೋಟೆಯ ಸಮಗ್ರ ಅಭಿವೃದ್ಧಿ ಕುರಿತು ಡಿಪಿಆರ್ ತಯಾರಿಸಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿರುವ ಅಶೋಕನ ಶಿಲಾಶಾಸನ (ಗವಿಮಠ ಪರಿಸರ) ಮತ್ತು ಅಶೋಕನ ಪಾಲ್ಕಿಗುಂಡು ಶಿಲಾಶಾಸನ, ಮಳೆಮಲ್ಲೇಶ್ವರ ದೇವಸ್ಥಾನದ ಬೆಟ್ಟದ ಮೇಲಿನ ಪ್ರಾಚೀನದಿನ್ನೆ, ಹಿರೇಬೆಣಕಲ್ ಗ್ರಾಮದ ಮೋರೆರ ಬೆಟ್ಟ ಹಾಗೂ ಇಟಗಿ ಗ್ರಾಮದ ಶ್ರೀ ಮಹಾದೇವ ದೇವಾಲಯ, ಈ 4 ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಸಂಬ0ಧಿಸಿದ0ತೆ ಅಂದಾಜು ಪಟ್ಟಿ ಸಲ್ಲಿಸಬೇಕು. ಕೊಪ್ಪಳದ ಹುಲಿಕೆರೆಯನ್ನು ಅಭಿವೃದ್ಧಿಪಡಿಸುವ ವಿಸ್ತುತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಿ ಸಲ್ಲಿಸಬೇಕು ಎಂದರು.
ಸ್ವದೇಶ್ ದರ್ಶನ್ 2.0 ಯೋಜನೆಯ ಟ್ರಾವೆಲರ್ ನೂಕ್ ರಾಯಲ್ (Travellers Nook Royal ) ಕಾಮಗಾರಿಯನ್ನು ಕೈಗೊಳ್ಳಲು ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದ ಸರ್ವೆ ನಂ: 17* ರಲ್ಲಿ 35 ಗುಂಟೆ ಜಮೀನನ್ನು ತರಬೇತಿ ಕೇಂದ್ರ ಹಾಗೂ ವಸತಿ ಉದ್ದೇಶಕ್ಕಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ರವರ ಹೆಸರಿನಲ್ಲಿ ಕಾಯ್ದಿರಿಸಲಾಗಿದ್ದು, ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆಯ ಹೆಸರಿಗೆ ಹಸ್ತಾಂತರಿಸಬೇಕು. ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯಲ್ಲಿನ 17 ಹಾಗೂ ಕನಕಗಿರಿ ವ್ಯಾಪ್ತಿಯಲ್ಲಿನ 3 ಸೇರಿ ಒಟ್ಟು 20 ಸ್ಮಾರಕಗಳನ್ನು ಗುರುತಿಸಲಾಗಿದ್ದು, ರಾಜ್ಯ ಸಂರಕ್ಷಿತ ಸ್ಮಾರಕಗಳೆಂದು ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆಯುಕ್ತರು ನಗರಸಭೆ, ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ, ಆಯುಕ್ತರು ಹಂಪಿ ವಿಶ್ವ ಪರಂಪರೆ ನಿರ್ಮಾಣ ಪ್ರಾಧಿಕಾರ, ಕಮಲಾಪುರದಲ್ಲಿರುವ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ. ಆರ್.ಶೇಜೇಶ್ವರ, ತಹಶಿಲ್ದಾರರು ಗಂಗಾವತಿ, ಸಹಾಯಕ ನಿರ್ದೇಶಕರು ಭೂ ದಾಖಲೆಗಳ ಇಲಾಖೆ ಗಂಗಾವತಿ, ಹೊಸಪೇಟೆಯ ಸೃಷ್ಟಿ ಆರ್ಕಿಟೆಕ್ಟ್ ಶ್ರೀಪಾದ, ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶಿಲ್ದಾರರು ಹಾಗೂ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್