ಕೋಲಾರ, 0೪ ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಜಿಲ್ಲೆಯ ನಗರಸಭೆ ಮತ್ತು ಪುರಸಭೆ ಪಟ್ಟಣ ಪಂಚಾಯತಿ ಅಧೀನದಲ್ಲಿರುವ ಎಲ್ಲಾ ಉದ್ಯಾನವನಗಳು ಮುಂಬರುವ ಅಕ್ಟೊಬರ್ ೨ರ ಗಾಂಧಿ ಜಯಂತಿ ಒಳಗಾಗಿ ಸುಸಜ್ಜಿತ ಗೊಳಿಸಬೇಕೆಂದು ಹಾಗೂ ಸಂಪೂರ್ಣ ಅಭಿವೃದ್ಧಿ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.
ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳ ಸಭೆಯನ್ನು ಕುರಿತು ಮಾತನಾಡಿದರು. ಮುಂದಿನ ಅಕ್ಟೋಬರ್ ೨ ರಂದು ಗಾಂಧಿ ಜಯಂತಿ ಇರುವುದರಿಂದ ಎಲ್ಲಾ ಉದ್ಯಾನವನದಲ್ಲಿಯೂ ಇದೇ ಭಾನುವಾರ ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರು ಸೇರಿ ಶ್ರಮಧಾನವನ್ನು ಪ್ರಾರಂಭ ಮಾಡಬೇಕು ಈ ಕಾರ್ಯವು ಅಕ್ಟೋಬರ್ ೨ ವರೆಗೂ ನಿರಂತರವಾಗಿ ಮುನ್ನಡೆಸಿ ಎಲ್ಲಾ ಉದ್ಯಾನವನಗಳನ್ನು ಆಕರ್ಷಕ ರೀತಿಯಲ್ಲಿ ಕಾಣುವಂತೆ ಮಾಡಿ ಸಾರ್ವಜನಿಕರಿಗೆ ಒದಗಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಪಾರ್ಕ್ಗಳಲ್ಲಿ ಮರಗಳಿಂದ ಒಣಗಿ ಉದುರುವ ಎಲೆಗಳನ್ನು ಒಂದೆಡೆ ಸಂಗ್ರಹಿಸಿ ಗೊಬ್ಬರವನ್ನು ಉತ್ಪತ್ತಿ ಮಾಡಲು ತಿಳಿಸಿದರು. ಅದೇರೀತಿ ನಗರದ ಭಾಗಗಳಲ್ಲಿ ಯಾವುದೇ ರೀತಿಯ ಕಸಕ್ಕೆ ಬೆಂಕಿ ಇಡುವುದನ್ನು ತಪ್ಪಿಸಬೇಕು ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರಸಭೆ ಪುರಸಭೆಗಳ ಮುಖ್ಯ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಅಭಿವೃದ್ಧಿ ಪಡಿಸಲು ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಉದ್ಯಾನಗಳಲ್ಲಿ ವಿದ್ಯುತ್, ಬೀದಿ ದೀಪಗಳನ್ನು ಹಾಗೂ ಸಾರ್ವಜನಿಕರಿಗೆ ವಾಯು ವಿಹಾರಕ್ಕಾಗಿ ಸೂಕ್ತ ರಸ್ತೆ ಕುಳಿತು ಕೊಳ್ಳಲು ಕಲ್ಲಿನ ಬೆಂಚ್ ಗಳನ್ನೂ ಅಳವಡಿಸಿ ಸಾರ್ವಜನಿಕರ ಬಳಕೆಗೆ ಒದಗಿಸಬೇಕು ಎಂದು ತಿಳಿಸಿದರು.
ನಗರಸಭೆಯ ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಕಲ್ಯಾಣಿ ಗಳನ್ನು ಸ್ವಚ್ಛಗೊಳಿಸಿಕೊಳ್ಳುವಂತೆ ತಿಳಿಸಿ ಸಮುದಾಯ ಸಂಘಟಕರಿಗೆ ಒಂದೇ ರೀತಿಯ ಸಮವಸ್ತ್ರ ಹಾಗೂ ಗುರುತಿನ ಚೀಟಿಯನ್ನು ವಿತರಿಸಲು ಸೂಚಿಸಿದರು.
ಈಗಾಗಲೇ ಕೋಲಾರ ನಗರಸಭೆ ಶ್ರೀನಿವಾಸಪುರ ಪುರಸಭೆ ವತಿಯಿಂದ ಉತ್ತಮ ಆಹಾರ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು ಅವುಗಳ ಹಂಚಿಕೆಯಲ್ಲಿ ಯಾವುದೇ ಲೋಪ ನಡೆಯದಂತೆ ಕ್ರಮವಹಿಸಲು ಸೂಚಿಸಿದರು.ಇನ್ನೂ ಉಳಿದ ಸ್ಥಳೀಯ ಸಂಸ್ಥೆಗಳು ಸೂಕ್ತವಾದ ಸ್ಥಳವನ್ನು ಗುರುತಿಸಿ ಆಹಾರ ಮಳಿಗೆಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶ ಅಧಿಕಾರಿ ಅಂಬಿಕಾ, ಎಇಇ ಶ್ರೀನಿವಾಸ್ ಸೇರಿದಂತೆ ಎಲ್ಲಾ ತಾಲ್ಲೂಕಿನ ನಗರಸಭೆ, ಪುರಸಭೆಗಳ ಮುಖ್ಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್