ಬೆಂಗಳೂರು, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಮಹಿಳೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಶಾಸಕ ಮುನಿರತ್ನ ನಿರಾಳರಾಗಿದ್ದಾರೆ. ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿಂದಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ.
ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರದ ದೂರು ನೀಡಿದ್ದರಿಂದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಲಾಗಿತ್ತು.
ತನಿಖೆಯ ವೇಳೆ ಮಹಿಳೆ ನಿದ್ರೆ ಮಾತ್ರೆ ಸೇವಿಸಿದ್ದಾಗಿ ಹೇಳಿದ್ದರೂ, ಆಕೆಯ ದೇಹದಲ್ಲಿ ಯಾವುದೇ ಮಾತ್ರೆಯ ಅಂಶ ಪತ್ತೆಯಾಗಿಲ್ಲವೆಂದು ವರದಿ ತಿಳಿಸಿದೆ. ಅಲ್ಲದೆ, ಆಕೆ ಆರೋಪ ಸಂಬಂಧ 8 ಬಾರಿ ರಿಹರ್ಸಲ್ ನಡೆಸಿದ್ದ ವಿಚಾರವೂ ತನಿಖೆಯಲ್ಲಿ ಬಹಿರಂಗವಾಗಿದೆ.
ಮುನಿರತ್ನ ತಮ್ಮ ಮೇಲಿನ ಆರೋಪ ಸುಳ್ಳು ಎಂದು ಪ್ರಕರಣವನ್ನು ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದರು. ಇದೀಗ ಆರೋಪ ಸಾಬೀತಾಗಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಕೆಯ ವಿಚಾರವನ್ನು ಹೈಕೋರ್ಟ್‌ನಲ್ಲಿ ಅವರ ಪರ ವಕೀಲರು ಮಂಡಿಸಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುನಿರತ್ನ ವಿರುದ್ಧದ ಆರೋಪ ಅಸ್ಥಿರವಾಗಿದೆ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa