ಗದಗ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಬಗರ್‌ಹುಕುಂ ರೈತರ ಹೋರಾಟ 16ನೇ ದಿನವೂ ಮುಂದುವರೆದಿದ್ದು, ರೈತರ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರೋಧ ನೀತಿ ಖಂಡಿಸಿ ಇಂದು 12 ಗಂಟೆಯಿಂದ ಜಿಲಾಧಿಕಾರಿಗಳ ಕಚೇರಿ ಎದುರು ಅರೆಬೆತ್ತಲೆ ಹೋರಾಟಕ್ಕೆ ಬಗರ್ ಹುಕುಂ ರೈತರು ನಿರ್ಧರಿಸಿದ್ದಾರೆ.
ಹಂತಹಂತವಾಗಿ ರೈತರು ತಮ್ಮ ಹೋರಾಟದ ರೂಪರೇಷವನ್ನು ಬದಲಾಯಿಸುತ್ತಿದ್ದು, ದಯಾಮರಣಕ್ಕೆ ಇನ್ನೆರಡು ದಿನದಲ್ಲಿ ರೈತರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡುವ ನಿರ್ಧಾರವನ್ನು ಮಾಡಿದ ಬೆನ್ನಲ್ಲೇ ಮಂಗಳವಾರ ರೈತರೆಲ್ಲ ಸೇರಿ ಜಿಲ್ಲಾಡಳಿತ ಭವನದೆದುರು ಅರೆಬೆತ್ತಲೆ ಹೋರಾಟವನ್ನು ಮಾಡಿ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಲು ತಿರ್ಮಾನಿಸಿದ್ದಾರೆ.
ಜಿಲ್ಲೆಯ ರೈತರು ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಅವಲಂಬಿತ ರೈತರು ಹಾಗೂ ನಾಗಾವಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡಿರುವುದರಿಂದ, ಸರ್ಕಾರದಿಂದ ಹಕ್ಕು ಪತ್ರ ಮತ್ತು ಪರಿಹಾರ ದೊರೆಯಬೇಕೆಂದು ದಿನಾಂಕ: 19.08.2025ರಿಂದ ಇಂದಿನವರೆಗೂ ಅಹೋರಾತ್ರಿ ಹೋರಾಟ ನಡೆಯುತ್ತಿದ್ದು, ಈ ಹಿಂದೆ 2023ರಲ್ಲಿ ಇದೇ ರೀತಿಯ ಅಹೋರಾತ್ರಿ ಧರಣಿ ನಡೆದಾಗ ಸಚಿವ ಎಚ್.ಕೆ.ಪಾಟೀಲರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಸಚಿವರು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ಹಾಜರಾಗಿ ಧರಣಿ ನಿರತ ಮಾರ್ಗದಲ್ಲಿ ಹೋದರು ಮಾನವಿಯತೆಯ ಹಿತದೃಷ್ಟಿಯಿಂದ ಭೇಟಿಯಾಗದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪೂರ್ತಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಕ ರೂಪಾ ನಾಯ್ಕ ಮಾತನಾಡುತ್ತಾ ಸುಮಾರೂ ಇಪ್ಪತ್ತೈದು ವರ್ಷಗಳಿಂದ ನಮ್ಮ ಸಂಸ್ಥೆ ಅರಣ್ಯ ಭೂಮಿ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡಿ ದಾವಣಗೇರೆ ಜಿಲ್ಲೆಯಲ್ಲಿ ಅನೇಕ ರೈತರಿಗೆ ಹಕ್ಕು ಪತ್ರಗಳನ್ನು ನೀಡಿದ್ದಾರೆ. ಧರಣಿ ನಿರತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಜಿಲ್ಲಾಡಳಿತ ರೈತರ ಬೇಡಿಕೆಗಳನ್ನು ಇಡೇರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು.
ಸತತ 15 ದಿನಗಳಿಂದ ಈ ಹೋರಾಟ ನಡೆಯುತ್ತಿದ್ದು, ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ರೈತರನ್ನು ಸೌಜನ್ಯಕ್ಕಾದರು ಭೇಟಿಯಾಗದಿರುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲಾ ಹೀಗಾಗಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಸತತ 15 ದಿನಗಳಿಂದ ಈ ಹೋರಾಟ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ರೈತ ವಿರೋಧಿ ಧೋರಣೆ ಖಂಡನೀಯ, ನ್ಯಾಯಸಮ್ಮತ ಬೇಡಿಕೆಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯೊದಕ್ಕೂ ಮುಂಚೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಮಹಾಸಭಾ. ರವಿಕಾಂತ ಅಂಗಡಿ ಹೇಳಿದರು.
ಪ್ರತಿಭಟನಾ ಸ್ಥಳದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಬಿ.ಎಸ್.ಚಿಂಚಲಿ, ಎನ್.ಟಿ.ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನಧಾಪ್, ಎಮ್ ಶಲವಡಿ ಸೇರಿದಂತೆ ಜಿಲ್ಲೆಯ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP