ಸಿಂಧನೂರು, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ರಾಯಚೂರು ವತಿಯಿಂದ ಬಾಲ್ಯವಿವಾಹ ನಿಷೇಧ ಕಾಯ್ದೆಯ ಜಾಗೃತಿ ಕಾರ್ಯಕ್ರಮವು ಸಿಂಧನೂರು ತಾಲೂಕಿನ ಆರ್‌ಹೆಚ್ ಕ್ಯಾಂಪ್‌ನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಈ ವೇಳೆ ಮಿಷನ್ ಶಕ್ತಿ ಯೋಜನೆಯ ಜಿಲ್ಲಾ ಸಂಯೋಜಕರಾದ ಬಾವಸಲಿ ಅವರು ಮಾತನಾಡಿ, ಬಾಲ್ಯ ವಿವಾಹವು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಸದೃಢ ಸಮಾಜ ನಿರ್ಮಾಣ ಮಾಡಲು ಬಾಲ್ಯವಿವಾಹದಂತಹ ಅನಿಷ್ಠ ಪದ್ದತಿಯನ್ನು ಹೋಗಲಾಡಿಸಬೇಕು. ಎಲ್ಲಾ ವಿದ್ಯಾರ್ಥಿಗಳು, ಬಾಲ್ಯವಿವಾಹ ಪದ್ದತಿ ವಿರುದ್ಧ ಹೋರಾಡಬೇಕು ಎಂದು ಸಲಹೆ ಮಾಡಿದರು.
ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ದತಿಗಳ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಬೇಕು. ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಬಾಲ್ಯ ವಿವಾಹ 2006ರ ಕಾಯ್ದೆಯ ಪ್ರಕಾರ ಬಾಲ್ಯವಿವಾಹವನ್ನು ಪ್ರೋತ್ಸಾಹಿಸಿದವರಿಗೆ ಕಠಿಣ ಶಿಕ್ಷೆ ಇದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಇಂತಹ ಅನಿಷ್ಠ ಪದ್ದತಿಯಿಂದ ದೂರವಿರಬೇಕು. ಸದೃಢ ಸಮಾಜ ನಿರ್ಮಾಣ ಮಾಡುವ ದಿಟ್ಟಹೆಜ್ಜೆ ಇಡಬೇಕು. ಬಾಲ್ಯವಿವಾಹ, ಬಾಲಕಾರ್ಮಿಕತೆಯ ಘಟನೆಗಳು ಕಂಡು ಬ0ದಲ್ಲಿ ಕೂಡಲೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ದೂರು ನೀಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಆರ್‌ಹೆಚ್ ಕ್ಯಾಂಪ್‌ನ ಸರಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ವೀಣಾ ಹಕ್ಕಲ್, ಮಕ್ಕಳ ಸಹಾಯವಾಣಿ ಅಧಿಕಾರಿ ಮುಕ್ಕಣ್ಣ, ಶಾಲೆಯ ಸಹ ಶಿಕ್ಷಕರಾದ ವೀರೇಶ್, ರವಿ, ಜಂಬಯ್ಯ ಸ್ವಾಮಿ, ಬಸಬಲಿಂಗಪ್ಪ, ಮಲ್ಲಪ್ಪ, ಸುರೇಶ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್