ಕೊಪ್ಪಳ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಂಸ್ಥೆಯನ್ನು ಹೊಂದಿರುವ ಪೆಂಕಾಕ್ ಸಿಲತ್ ಕ್ರೀಡೆಗೆ ಮುಖ್ಯಮಂತ್ರಿ ಅವರ ಹಂತದಲ್ಲಿ ಬಾಕಿ ಇರುವ ಮಾನ್ಯತೆಯನ್ನು ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿ ವಿವರಿಸಿ ಮಾನ್ಯತೆ ಕೊಡಿಸುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಭರವಸೆ ನೀಡಿದರು.
ಭಾರತೀಯ ಪೆಂಕಾಕ್ ಸಿಲತ್ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಅಸೊಸಿಯೇಷನ್, ಜಿಲ್ಲಾ ಅಥ್ಲೆಟಿಕ್ ಅಸೊಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದಲ್ಲಿ ನಗರದಲ್ಲಿ ಇದೇ ಸೆಪ್ಟೆಂಬರ್ 26 ರಿಂದ ಮೂರು ದಿನಗಳ ಕಾಲ ನಡೆದ 13ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾವೂ ಒಬ್ಬ ಕ್ರೀಡಾಪಟುವಾಗಿದ್ದು, ಬರುವ ದಿನಗಳಲ್ಲಿ ಕ್ರೀಡೆಗೆ ಇನ್ನಷ್ಟು ಒತ್ತು ನೀಡಿ ಸಹಕಾರ ಕೊಡಲಾಗುವುದು. ಕ್ರೀಡೆಯಿಂದ ಮನುಷ್ಯ ಹೆಚ್ಚು ಬೆಳಗುತ್ತಾನೆ, ಆರೋಗ್ಯಕ್ಕೂ ಒಳ್ಳೆಯದು. ಜಿಲ್ಲೆಯ ಕ್ರೀಡಾಪಟುಗಳು ಇನ್ನಷ್ಟು ಸಾಧನೆ ಮಾಡಲಿ ಎಂದರು.
ನಮ್ಮ ಜಿಲ್ಲೆಯಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದು ಸಂತಸ, ಬಹಳ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡುವಷ್ಟು ಶಕ್ತಿ ಇಲ್ಲಿನ ಸಂಘಟಕರಿಗೆ ಇದೆ. ಇಲ್ಲಿನ ಪೂಜ್ಯ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಸತಿ ಹಾಗೂ ಊಟಕ್ಕೆ ಬಹಳ ಸಹಕಾರ ನೀಡಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರು ಮಾತನಾಡಿ, ರಾಷ್ಟ್ರದ 33 ರಾಜ್ಯಗಳ 1500 ಜನರು ಕೊಪ್ಪಳಕ್ಕೆ ಬಂದಿರುವುದು ವಿಸ್ಮಯ ತಂದಿದೆ, ನಮ್ಮೂರಲ್ಲಿ ಇಂತಹ ಕಾರ್ಯಕ್ರಮ ಸಂಘಟಿಸುವ ಶಕ್ತಿ ಇರುವ ಯುವಕರು ಇರುವುದು ಬಹಳ ಸಂತಸ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮಾತನಾಡಿ, ಇಡೀ ದೇಶವೇ ಇಂದು ಕೊಪ್ಪಳದಲ್ಲಿ ನಿಂತ ಹಾಗೆ ಭಾಸವಾಗುತ್ತಿದೆ, ಇಷ್ಟು ಜನರನ್ನು ಕರೆಸಿ ಕ್ರೀಡಾಕೂಟ ನಡೆಸಿರುವುದು ಸಾಮಾನ್ಯವಲ್ಲ, ಬಹುಭಾಷೆ, ಬಹು ಸಂಸ್ಕೃತಿ, ಬಹು ಆಯಾಮದ ಭಾರತಕ್ಕೆ ಕೊಪ್ಪಳವನ್ನು ಪರಿಚಯಿಸಿದ ಸಂಘಟಕರು ಅಭಿನಂದನಾರ್ಹರು ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರು ಹಾಗೂ ಪೆಂಕಾಕ್ ಸಿಲತ್ ರಾಜ್ಯ ಗೌರವ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಸಾಯಿ ಸಂಸ್ಥೆಯ ಕುಸ್ತಿ ತರಬೇತುದಾರರು, ಸಿಲತ್ ರಾಷ್ಟ್ರೀಯ ಕ್ರೀಡಾಕೂಟದ ವೀಕ್ಷಕ ರಾಮ್ ಎಸ್. ಬುಡಕಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರ ವಿಠ್ಠಲ ಚೌಗಲಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮತ್ತು ರಾಜ್ಯ ಸಿಲತ್ ಸಂಸ್ಥೆ ಜಂಟಿ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಸಿಲತ್ ಸಂಸ್ಥೆ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷೆ ಫಿಲಿಯಾ ಥಾಮಸ್, ರಾಷ್ಟ್ರೀಯ ಪೆಂಕಾಕ್ ಸಿಲತ್ ಫೆಡರೇಷನ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೈಲರ್, ರಾಷ್ಟ್ರೀಯ ಖಜಾಂಚಿ ತಾರಿಖ್ ಅಹ್ಮದ್ ಜರ್ಗಾರ್, ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಅಲಂಪಲ್ಲಿ, ಜಿಲ್ಲಾ ಅಧ್ಯಕ್ಷ ಮೌನೇಶ ವಡ್ಡಟ್ಟಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಬದಾಮಿ, ಹನುಮಸಾಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಾಚಲಾಪೂರ, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಮುಖಂಡರಾದ ಪ್ರಲ್ಹಾದರಾವ್ ದೇಸಾಯಿ, ಬಿ. ಎಫ್. ಇಬ್ರಾಹಿಂ, ಮಹಮ್ಮದ್ ಅಬ್ದುಲ್ ಕರಿಮ್ ವಂಟೆಳಿ, ವಿಶ್ವನಾಥ್ ಕನ್ನೂರ, ಪ್ರಹ್ಲಾದ್ ಅಗಳಿ, ಕಾಂಗ್ರೆಸ್ ಮುಖಂಡರಾದ ರವಿ ಕುರಗೋಡ ಯಾದವ, ಗಂಗಾಧರಸ್ವಾಮಿ ಕನಕಗಿರಿ, ಜ್ಯೋತಿ ಎಂ. ಗೊಂಡಬಾಳ, ವಿಶಾಲಾಕ್ಷಿ ತಾವರಗೇರಿ, ಸಲೀಂ ಅಳವಂಡಿ, ಸುಮಂಗಲಾ ನಾಯಕ್, ಮಲ್ಲಿಕಾರ್ಜುನ ಪೂಜಾರ, ಅಥ್ಲೆಟಿಕ್ ಸಂಸ್ಥೆಯ ಶರಣಬಸವ ಬಂಡಿಹಾಳ, ರಿಯಾಜ್ ಮಂಗಲೂರ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್