ಬೆಂಗಳೂರು, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾವು ನೋವು ಉಂಟಾಗಿದೆ. ಕಲಬುರ್ಗಿ ಹಾಗೂ ಬೀದರ್‌ನಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಈವರೆಗೆ ಯಾವುದೇ ಸಚಿವರು ಕ್ರಮ ವಹಿಸಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಬಿಜೆಪಿ ಅವಧಿಯಲ್ಲಿ ಡಬಲ್ ಪರಿಹಾರ ನೀಡಲಾಗಿತ್ತು. ಸರ್ಕಾರದ ಬಳಿ ಹಣವಿದ್ದರೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣವಿಲ್ಲದೆ ಸಚಿವರು ಹಾಗೂ ಮುಖ್ಯಮಂತ್ರಿ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಸಂಪೂರ್ಣ ಗಮನ ಜಾತಿ ಸಮೀಕ್ಷೆಯ ಕಡೆಗಿದೆ. ಮನೆ ಹಾನಿಗೆ ಹಾಗೂ ಬೆಳೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ತನ್ನ ಪಾಲಿನ ಪರಿಹಾರದ ಹಣವನ್ನು ನೀಡುತ್ತದೆ. ರಾಜ್ಯ ಸರ್ಕಾರದಿಂದ ತಕ್ಷಣ 3,000 ಕೋಟಿ ರೂ. ಪರಿಹಾರ ಘೋಷಿಸಿ ವಿತರಣೆ ಮಾಡಬೇಕು. ಬಿಜೆಪಿ ಅವಧಿಯಲ್ಲಿ 30 ದಿನಕ್ಕಾಗುವಷ್ಟು ದಿನಸಿ ನೀಡಲಾಗಿತ್ತು. ಈ ಸರ್ಕಾರ ಅರ್ಧ ಕೆಜೆ ಅಕ್ಕಿಯೂ ಕೊಟ್ಟಿಲ್ಲ. ಬಿಜೆಪಿ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ನಾನು ಕೂಡ ಪ್ರವಾಸ ಮಾಡಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬಿಡದಿಯಲ್ಲಿ ಅಭಿವೃದ್ಧಿಗಾಗಿ ಪಡೆದ ಜಮೀನನ್ನು ಎಚ್.ಡಿ.ಕುಮಾರಸ್ವಾಮಿ ಕೈ ಬಿಟ್ಟಿದ್ದರು. ನಾವು ಕೂಡ ಆ ಯೋಜನೆ ಕೈ ಬಿಟ್ಟಿದ್ದೆವು. ಈಗ ರಿಯಲ್ ಎಸ್ಟೇಟ್ ಮೂಲಕ ದುಡ್ಡು ಹೊಡೆಯಲು ಡಿ.ಕೆ.ಶಿವಕುಮಾರ್ ಈ ಯೋಜನೆ ಮತ್ತೆ ತಂದಿದ್ದಾರೆ. ಆನೇಕಲ್, ಯಲಹಂಕ ಮೊದಲಾದ ಭಾಗಗಳಲ್ಲಿ ನಿವೇಶನ ಮಾಡಿದ ನಂತರ ಬಿಡದಿಗೆ ಏಕೆ ಹೋಗುತ್ತಿದ್ದಾರೆ? ಈಗಾಗಲೇ ಅನೇಕ ನಿವೇಶನಗಳು ಖಾಲಿ ಇದೆ. ಬಿಡದಿಯಲ್ಲಿ ರೈತರ ಜಮೀನುಗಳಿವೆ. ಅಂತಹ ಫಲವತ್ತಾದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡಬಾರದು ಎಂದರು.
ಜಾತಿ ಸಮೀಕ್ಷೆಯಲ್ಲಿ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ತಮಗೆ ಬೇಕಾದ ಜಾತಿಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಸಮೀಕ್ಷೆಗೆ ಪೂರ್ವ ತಯಾರಿ ಮಾಡಿಲ್ಲ. ಕೇವಲ ಹದಿನೈದು ದಿನಗಳಲ್ಲಿ ಮುಗಿಸಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಸಾಕಷ್ಟು ಸಮಯ ಇಟ್ಟುಕೊಂಡು ಸಮೀಕ್ಷೆ ಮಾಡಬೇಕು. ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಇಷ್ಟಪಡಿಸಲು ಮಾಡುತ್ತಿರುವ ಸಮೀಕ್ಷೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa