ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 42ನೇ ಭಾರತೀಯ ಕರಾವಳಿ ಕಾವಲು ಪಡೆಯ ಕಮಾಂಡರ್‌ಗಳ ಸಮ್ಮೇಳನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿಂದೂ ಮಹಾಸಾಗರ ಪ್ರದೇಶದ ಹೆಚ್ಚುತ್ತಿರುವ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಕಡಲ ಭಯೋತ್ಪಾದನೆ, ಅಕ್ರಮ ಮೀನುಗಾರಿಕೆ, ಕಳ್ಳಸಾಗಣೆ ಮತ್ತು ಸಮುದ್ರ ಮಾಲಿನ್ಯದಂತಹ ಸಾಂಪ್ರದಾಯಿಕವಲ್ಲದ ಬೆದರಿಕೆಗಳನ್ನು ಎದುರಿಸುವಲ್ಲಿ ಐಸಿಜಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
1977ರಲ್ಲಿ ಸ್ಥಾಪನೆಯಾದ ಐಸಿಜಿ ಇಂದು 152 ಹಡಗುಗಳು ಹಾಗೂ 78 ವಿಮಾನಗಳ ಬಲಿಷ್ಠ ಪಡೆ ಹೊಂದಿದೆ. “ವಯಂ ರಕ್ಷಮ” ಎಂಬ ಧ್ಯೇಯವಾಕ್ಯದೊಂದಿಗೆ ಕರಾವಳಿ ಭದ್ರತೆಯನ್ನು ಬಲಪಡಿಸುವಲ್ಲಿ ಪಡೆ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದರು.
1,600ಕ್ಕೂ ಹೆಚ್ಚು ವಿದೇಶಿ ಹಡಗುಗಳು ಮತ್ತು 13,000ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿರುವುದಲ್ಲದೆ, ₹37,833 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಸಾಧನೆಯನ್ನು ಅವರು ಪ್ರಸ್ತಾಪಿಸಿದರು.
ಈ ವರ್ಷವೇ 76 ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿ 74 ಜೀವಗಳನ್ನು ಉಳಿಸಿರುವುದನ್ನು ಉಲ್ಲೇಖಿಸಿ, ಐಸಿಜಿಯ ದಕ್ಷತೆಯನ್ನು ರಾಜನಾಥ್ ಸಿಂಗ್ ಮೆಚ್ಚಿದರು. ಸಮುದ್ರದಲ್ಲಿನ ಅಪಾಯದ ಸಂದರ್ಭಗಳಲ್ಲಿ ಪಡೆ ತೋರಿದ ತ್ವರಿತ ಕ್ರಮವು ಕಾರ್ಯಾಚರಣೆಯ ಸಿದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಮೂರು ದಿನಗಳ ಸಮ್ಮೇಳನದಲ್ಲಿ ಕಾರ್ಯತಂತ್ರ, ಕಾರ್ಯಾಚರಣೆ, ಲಾಜಿಸ್ಟಿಕ್ಸ್, ಮಾನವ ಸಂಪನ್ಮೂಲ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಯಲಿದೆ. ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಸ್ವದೇಶೀಕರಣ ಮತ್ತು ಸ್ವಾವಲಂಬನೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa