ಧಾರವಾಡ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ, ಎಸ್ ಡಿಎಮ್ ನಾರಾಯಣ ಹಾರ್ಟ್ ಸೆಂಟರ್, ಧಾರವಾಡ, ಹೃದಯ ಆರೋಗ್ಯ ಹಾಗೂ ಹೃದಯಾಘಾತ ತಡೆಗಟ್ಟುವಿಕೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬೈಕಥಾನ್ (ಬೈಕ್ ಜಾಥಾ) ಆಯೋಜಿಸಿತ್ತು.
ಈ ಜಾಥಾಗೆ ಧಾರವಾಡ ಶಹರ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಶಾಂತ ಸಿದ್ದನಗೌಡರ ಮತ್ತು ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಮುರುಗೇಶ್ ಚನ್ನಣ್ಣವರ್ ಚಾಲನೆ ನೀಡಿದರು.
ಈ ಜಾಥಾವು ಎಸ್ ಡಿ ಎಮ್ ಮಹಾವಿದ್ಯಾಲಯ ಆಸ್ಪತ್ರೆಯಿಂದ ಪ್ರಾರಂಭವಾಗಿ ಪಿ.ಬಿ. ರಸ್ತೆ, ಕೋರ್ಟ್ ಸರ್ಕಲ್, ಜೂಬಿಲಿ ಸರ್ಕಲ್ ಮತ್ತು ಕಾಲೇಜ್ ರಸ್ತೆಯ ಮೂಲಕ ಸಾಗಿ ಕರ್ನಾಟಕ ಕಾಲೇಜು, ಧಾರವಾಡ (ಕೆಸಿಡಿ)ಯಲ್ಲಿ ಅಂತ್ಯ ಗೊಂಡಿತು.
ಇದು ಸುಮಾರು 8.3 ಕಿ. ಮೀ ದೂರ ಜಾಥಾ ನಡೆದು ಸುಮಾರು 200 ಕ್ಕೂ ಹೆಚ್ಚು ಬೈಕ್ ಸವಾರರು ತಮ್ಮ ದ್ವಿ ಚಕ್ರ ವಾಹನಗಳ ಮೂಲಕ ಈ ಜಾಥಾ ದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು, ಬೈಕರ್ ಗುಂಪುಗಳು, ಸಾರ್ವಜನಿಕ ಗುಂಪುಗಳು, ಆರೋಗ್ಯ ಪ್ರೇಮಿಗಳು ಹಾಗೂ ಸ್ಥಳೀಯ ನಾಗರಿಕರು, ಉತ್ಸಾಹದಿಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಸ್ಪತ್ರೆಯ ಹಿರಿಯ ಹೃದಯ ರೋಗ ತಜ್ಞರಾದ ಡಾ. ರಘು ಪ್ರಸಾದರವರು ಮಾತನಾಡಿ ಆರೋಗ್ಯದ ಕಾಳಜಿ ವಹಿಸುವದು ಸೂಕ್ತ ಅದರ ಜೊತೆ ನಿಯಮಿತವಾಗಿ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಅರವಳಿಕೆ ತಜ್ಞರಾದ ಡಾ. ಗಣೇಶ ನಾಯಕ್ ರವರು ಮಾತನಾಡಿ ಪ್ರತಿಯೊಬ್ಬರ ಜೀವನಶೈಲಿ ಚೆನ್ನಾಗಿರಬೇಕು ಪ್ರತಿನಿತ್ಯ ಯೋಗ ವ್ಯಾಯಾಮದಂತಹ ಚಟುವಟಿಕೆಯಲ್ಲಿ ನಿರತವಾಗಿರಬೇಕು ಅಲ್ಲದೇ ಆಹಾರ ಪದ್ಧತಿ ಚೆನ್ನಾಗಿರಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕುಮಾರ್ ಐ. ಪಟ್ಟಣಶೆಟ್ಟಿರವರು ಮಾತನಾಡಿ ವಿಶ್ವ ಹೃದಯ ದಿನಾಚರಣೆಯ ಮಹತ್ವ ತಿಳಿಸಿ ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ ನ 16 ವರ್ಷದ ಸಾಧನೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಕೀರ್ತಿ ಪಿ.ಎಲ್ ರವರು ಮತ್ತು ರೈಲ್ವೆ ಇಲಾಖೆಯ ನಿವೃತ್ತ ನ್ಯಾಯಮೂರ್ತಿಗಳಾದ ಜಿ ವಿ ರಾಮನಗೌಡರ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa