ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿಗಳನ್ನು ನೀಡಲೇಬೇಕು ಎಂದೇನಿಲ್ಲ. ಸೂಕ್ತ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕು. ಸಮೀಕ್ಷೆ ವಿಚಾರದಲ್ಲಿ ಜನರು ಎಚ್ಚರವಾಗಿರಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ಎಲ್ಲ ವಿವರವನ್ನು ಬಹಿರಂಗೊಳಿಸಬಾರದು. ಜನರ ಬಳಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಇದನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಖಜಾನೆಯಲ್ಲಿ ಹಣವಿಲ್ಲದೆ, ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಅದಕ್ಕಾಗಿ ಮಾನದಂಡ ಬೇಕಾಗುತ್ತದೆ. ಈ ಕಾರಣಕ್ಕಾಗಿ ಹಾಗೂ ಯೋಜನೆಗಳಿಗೆ ಕತ್ತರಿ ಹಾಕಲು ಜಾತಿ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.
ಮುಂದಿನ ಬಜೆಟ್ ರಚನೆ ಸಿದ್ದರಾಮಯ್ಯನವರಿಗೆ ಕಗ್ಗಂಟಾಗಿದೆ. ಅದಕ್ಕಾಗಿ ಹಣ ಉಳಿಸಬೇಕಿದೆ. ಇದು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅಲ್ಲ, ಇದು ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ. ಜನರಿಗೆ ಪಂಗನಾಮ ಹಾಕುವ ಸಮೀಕ್ಷೆ. ಯಾರೂ ವೈಯಕ್ತಿಕ ದಾಖಲೆಗಳನ್ನು ನೀಡಬಾರದು. ಯಾವ್ಯಾವ ಪ್ರಶ್ನೆಗೆ ಉತ್ತರ ಕೊಡಬಹುದೋ ಅಷ್ಟನ್ನು ಮಾತ್ರ ನೀಡಿದರೆ ಸಾಕು. ಹೈಕೋರ್ಟ್ ಕೂಡ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ ಎಂದಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa