ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವು ಹಿಂದುಳಿದ ವರ್ಗಗಳ ಆಯೋಗದ ಸೂಚನೆಯಂತೆ ವೇಗವಾಗಿ ನಡೆಯಬೇಕು. ರಾಯಚೂರು ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾದ ಎಲ್ಲ ಗಣತಿದಾರರು, ಮೇಲ್ವಿಚಾರಕರು ಚುರುಕಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸೂಚನೆ ನೀಡಿದರು.
ಸೆ.28ರಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವು ಈಗಾಗಲೇ ಸೆ.22ರಂದೇ ಆರಂಭವಾಗಿದೆ. ಅಕ್ಟೋಬರ್ 7ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದ್ದು, ಈ ಕಾಲಿಮಿತಿಯೊಳಗೆ ಸಮೀಕ್ಷಾ ಕಾರ್ಯವು ಪೂರ್ಣವಾಗಬೇಕು. ಎಲ್ಲ ಗಣತಿದಾರರು ತಮ್ಮ ಕಾರ್ಯದ ಮಹತ್ವ ಅರಿತು ಸಕ್ರಿಯ ಭಾಗಿಯಾಗಬೇಕು. ಮೇಲ್ವಿಚಾರಕರು ಸಹ ಕಾಲಕಾಲಕ್ಕೆ ಗಣತಿದಾರರನ್ನು ಸಂಪರ್ಕಿಸಿ ಮಾರ್ಗದರ್ಶನ ಮಾಡಬೇಕು. ಸಮೀಕ್ಷೆ ಕಡಿಮೆಯಾದ ಕಡೆಗಳಲ್ಲಿ ವೇಗಗೊಳಿಸಬೇಕು. ಗಣತಿದಾರರು ಕ್ಷೇತ್ರ ಕಾರ್ಯದಲ್ಲಿದ್ದ ಬಗ್ಗೆ ಪ್ರತಿ ದಿನ ಬೆಳಗ್ಗೆಯೇ ಮೇಲ್ವಿಚಾರಕರು ಕರೆ ಮಾಡಿ ಖಚಿತಪಡಿಸಿಕೊಳ್ಳಬೇಕು. ಸಮೀಕ್ಷಾ ಹಿನ್ನೆಲೆಯಲ್ಲಿ ಈಗಾಗಲೇ ತರಬೇತಿ ಪಡೆದು ಬಂದಿರುವ ಮಾಸ್ಟರ್ ಟ್ರೇನರಗಳ ಸಹಾಯ ಪಡೆದು, ಏನಾದರು ತೊಡಕಗಳು ಇದ್ದಲ್ಲಿ ಕೂಡಲೇ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈ ಹಿಂದಿನ ಸಭೆಯಲ್ಲಿ ತಿಳಿಸಿದಂತೆ ನೋಡಲ್ ಅಧಿಕಾರಿಗಳು ಈ ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆ ನಡೆಸಬೇಕು. ಎಲ್ಲಾ ತಾಲೂಕುಗಳಲ್ಲಿ ಸಮೀಕ್ಷಾ ಕಾರ್ಯದ ಪ್ರಗತಿಯು ಏಕಕಾಲಕ್ಕೆ ಆಗಬೇಕು. ಆಯಾ ತಾಲೂಕಿನ ಸಮೀಕ್ಷಾ ಕಾರ್ಯದ ಬಗ್ಗೆ ಪ್ರತಿ ದಿನ ವರದಿ ಮಾಡಬೇಕು ಎಂದು ಸೂಚನೆ ನೀಡಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಬಸವಣೆಪ್ಪ ಕಲಶಟ್ಟಿ, ತಹಸೀಲ್ದಾರ ಸುರೇಶ ವರ್ಮಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸುನೀತಾ ಘಟಕಾಂಬಳೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್