ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಯುದ್ಧೋಪಾದಿಯಲ್ಲಿ ನಡೆಯಲಿ : ಜಿಲ್ಲಾಧಿಕಾರಿ
ರಾಯಚೂರು, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಕಾರ್ಯವು ಅಕ್ಟೋಬರ್ 7ರವರೆಗೆ ಯುದ್ಧೋಪಾದಿಯಲ್ಲಿ ನಡೆಯಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಯುದ್ಧೋಪಾದಿಯಲ್ಲಿ ನಡೆಯಲಿ : ಜಿಲ್ಲಾಧಿಕಾರಿ


ರಾಯಚೂರು, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಕಾರ್ಯವು ಅಕ್ಟೋಬರ್ 7ರವರೆಗೆ ಯುದ್ಧೋಪಾದಿಯಲ್ಲಿ ನಡೆಯಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ ಮತ್ತು ಮೇಲ್ವಿಚಾರಣೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಸಮೀಕ್ಷೆಯು ರಾಜ್ಯಾದ್ಯಂತ ಏಕಕಾಲಕ್ಕೆ ಆರಂಭಗೊಂಡು ಎಲ್ಲ ಕಡೆಗಳಲ್ಲಿ ನಡೆಯುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಸಹ ಅತ್ಯುತ್ತಮ ರೀತಿಯಲ್ಲಿ ಈ ಸಮೀಕ್ಷೆ ನಡೆಯಲು ಈ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಧ್ಯೆದಲ್ಲಿನ ಸಮನ್ವಯತೆ ಅತ್ಯಂತ ಮುಖ್ಯವಾಗಿದೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರಾಯಚೂರ ತಾಲೂಕು ಸೇರಿದಂತೆ ಸಿಂಧನೂರ, ಮಾನ್ವಿ, ಮಸ್ಕಿ, ಲಿಂಗಸೂಗುರು, ಅರಕೇರಾ, ಸಿರವಾರ, ದೇವದುರ್ಗ ಎಲ್ಲಾ ತಾಲೂಕಿನಲ್ಲಿ ಏಕಕಾಲಕ್ಕೆ ಸಮೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು. ಕುಟುಂಬದ ಸಂಖ್ಯೆಗಳನ್ನು ಗುರುತಿಸಿ ಪ್ರತಿ ಗಣಿತಿದಾರರಿಗೆ ಇಂತಿಷ್ಟು ಮನೆಗಳ ಸಮೀಕ್ಷಾ ಕಾರ್ಯಕ್ಕಾಗಿ ಎಲ್ಲಾ ತಾಲೂಕುಗಳು ಸೇರಿ ಒಟ್ಟು 3178 ಗಣತಿದಾರರನ್ನು ನಿಯೋಜಿಸಲಾಗಿದೆ. ಇಂತಹ 10 ಬ್ಲಾಕ್‍ಗಳಿಗೆ ಒಬ್ಬ ಗಣಿತಿ ಮೇಲ್ವಿಚಾರಕರೆಂದು 340 ಜನರನ್ನು ನೇಮಿಸಲಾಗಿದೆ. ತರಬೇತಿಗಾಗಿ 08 ರಾಜ್ಯಮಟ್ಟದ 68 ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್‍ಗಳನ್ನು, ಪ್ರತಿ ತಾಲ್ಲೂಕಿಗೆ ಜಿಲ್ಲಾಮಟ್ಟದ ನೋಡಲ್ ಅಧಿಕಾರಿ, ತಾಂತ್ರಿಕ ಸಿಬ್ಬಂದಿ ನಿಯೋಜಿಸಲಾಗಿದೆ. ಗಣಿತಿದಾರರಾಗಿ ನೇಮಕಗೊಂಡ ಶಿಕ್ಷಕರು, ಮೇಲ್ವಿಚಾರಕರಾಗಿ ನೇಮಕಗೊಂಡ ಶಿಕ್ಷಣ ಇಲಾಖೆಯ ಸಿ.ಆರ್.ಪಿ.ಗಳು ಮತ್ತು ಮಾಸ್ಟರ್ ಟ್ರೈನರಗಳಾಗಿ ನೇಮಕಗೊಂಡ ಡಯಟ್ ಹಾಗೂ ಪದವಿ ಪೂರ್ವ ಕಾಲೇಜಿ ಉಪನ್ಯಾಸಕರು ಎಲ್ಲರೂ ಈ ಸಮೀಕ್ಷಾ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿಯೊಬ್ಬರು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಗಣಿತಿದಾರರಿಗೆ ಕೈಪಿಡಿ, ಬ್ಯಾಗ್, ಟೋಪಿ ಮತ್ತು ಸ್ವಯಂ ದೃಢೀಕರಣ ಪತ್ರಗಳ ಕಿಟ್ ನೀಡಲಾಗಿದೆ. ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಗಳಲ್ಲಿ ವಾರ್ ರೂಮ್‍ಗಳನ್ನು ಸ್ಥಾಪಿಸಿ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಮೀಕ್ಷಾ ಕಾರ್ಯವು ಸುಗಮವಾಗಿ ಮತ್ತು ವೇಗವಾಗಿ ನಡೆಯಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಈ ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸೆ.7ರವರೆಗೆ ಸಮೀಕ್ಷಾ ಕಾರ್ಯಕ್ಕೆ ಮೊದಲ ಆಧ್ಯತೆ ನೀಡಬೇಕು. ನಿರಂತರವಾಗಿ ಕ್ಷೇತ್ರಭೇಟಿ ನಡೆಸಿ ಸಮೀಕ್ಷಾ ಕಾರ್ಯ ಚಾಲ್ತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಯಾವ ಕಡೆಗಳಲ್ಲಿ ಸಮೀಕ್ಷಾ ಕಾರ್ಯ ಮಂದಗತಿಯಲ್ಲಿದೆ ಎಂಬುದನ್ನು ಗುರುತಿಸಿ ಅಂತಹ ಕಡೆಗೆ ಸಮೀಕ್ಷಾ ಕಾರ್ಯವನ್ನು ಚುರುಕುಗೊಳಿಸಬೇಕು. ಅಕ್ಟೋಬರ್ 7ರವರೆಗೆ ಸಮಯವಕಾಶವಿದೆ ಎಂದು ಕಾಯದೇ ಗಣತಿದಾರರು ತಮಗೆ ನಿಗದಿಪಡಿಸಿದ ಗುರಿಯನ್ನು ಬೇಗನೆ ಪೂರ್ಣಗೊಳಿಸಿ ರಜೆ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಮೇಲ್ವಿಚಾರಕರು ಪ್ರತಿ ಗಂಟೆಗೊಮ್ಮೆ ಕರೆ ಮಾಡಿ ಸಮೀಕ್ಷಾ ಕಾರ್ಯ ಬೆಳಗ್ಗೆಯಿಂದಲೇ ಆರಂಭವಾಗಿದೆಯಾ? ಎಲ್ಲ ಗಣತಿದಾರರು ಕ್ಷೇತ್ರ ಕಾರ್ಯದಲ್ಲಿದ್ದಾರಾ? ಎಂಬುದನ್ನು ಪರೀಕ್ಷಿಸಬೇಕು. ಎಲ್ಲ ಮಾಸ್ಟರ್ ಟ್ರೇನರಗಳು ಕಡ್ಡಾಯವಾಗಿ ಅಕ್ಟೋಬರ್ 7ರವರೆಗೆ ಆಯಾ ತಾಲೂಕು ಕೇಂದ್ರ ಸ್ಥಾನದಲ್ಲಿದ್ದು ಗಣತಿದಾರರಿಗೆ ಮಾರ್ಗದರ್ಶನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಹಾಯಕ ಆಯುಕ್ತರು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಸೇರಿದಂತೆ ಇನ್ನೀತರನ್ನು ಒಳಗೊಂಡ ವಿಶೇಷ ನೋಡಲ್ ಅಧಿಕಾರಿಗಳು, ಈ ಮುಂಚಿತವಾಗಿ ನೇಮಕೊಂಡಿ ಎಲ್ಲ ನೋಡಲ್ ಅಧಿಕಾರಿಗಳು ನಿರಂತರವಾಗಿ ಕ್ಷೇತ್ರ ಭೇಟಿ ನಡೆಸಿ ಮೇಲ್ಚಿಚಾರಣೆ ನಡೆಸಬೇಕು. ಆಯಾ ತಾಲೂಕುಗಳಲ್ಲಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಎಲ್ಲರೂ ಪ್ರತಿ ದಿನ ಸಭೆ ಸೇರಿ ಸಮೀಕ್ಷಾ ಪ್ರಗತಿ ಕಾರ್ಯದ ಬಗ್ಗೆ ಚರ್ಚಿಸಿ ಸಮ್ವನಯದಿಂದ ಕೆಲಸ ನಿರ್ವಹಿಸಬೇಕು. ಅವರು ಇವರು ಎನ್ನದೇ ಈ ಗಣತಿ ಕಾರ್ಯಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಕರೆ ಮಾಡಿದಾಗ ಸ್ವೀಕರಿಸದೇ, ನಿಗದಿಪಡಿಸಿದ ಅವಧಿಯೊಳಗೆ ಕಾರ್ಯ ಮಾಡದೇ ಯಾರಾದರು ನಿರ್ಲಕ್ಷ್ಯ ವಹಿಸಿದಲ್ಲಿ ಅಂತವರನ್ನು ಅಮಾನತು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ ಅವರು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವು ಬರುವ ಅಕ್ಟೋಬರ್ 07ರವರೆಗೆ ನಡೆಯಲಿದೆ. ಗಣಿತಿದಾರರು ಮನೆಮನೆಗೆ ಭೇಟಿ ನೀಡಿ ಕುಟುಂಬದ ಅಂಕಿ-ಅಂಶಗಳನ್ನು ಸಂಗ್ರಹಿಸುವ ಈ ಕಾರ್ಯವು ಜಿಲ್ಲೆಯಲ್ಲಿ ಶಿಸ್ತುಬದ್ಧವಾಗಿ ನಡೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಏನಾದರು ಗೊಂದಲಗಳಿದ್ದಲ್ಲಿ ಅಧಿಕಾರಿಗಳು ತಮ್ಮ ಮೇಲಿನ ಅಧಿಕಾರಿಗಳನ್ನು ಅಥವಾ ಜಿಲ್ಲಾಧಿಕಾರಿಗಳು ಅಥವಾ ತಮಗೆ ನೇರವಾಗಿ ಕರೆ ಮಾಡಿ ಕೇಳಿ ಪರಿಹರಿಸಿಕೊಳ್ಳಬೇಕು. ಎಲ್ಲ ತಾಲೂಕುಗಳಲ್ಲಿ ಕಂಟ್ರೋಲ್ ರೂಮುಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರ ಗಣತಿದಾರರ ಮೇಲೆ ಪ್ರತಿ ದಿನ ಸರಿಯಾಗಿ ಮೇಲ್ವಿಚಾರಣಾ ಕಾರ್ಯವಾಗಬೇಕು. ಆಯಾ ಕಡೆಗಳಲ್ಲಿ ಜಿಂಗಲ್ಸ್ ಮೂಲಕ ಹೆಚ್ಚಿನ ಪ್ರಚಾರ ಕಾರ್ಯಕ್ಕೆ ಏರ್ಪಾಡು ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಬಸವಣೆಪ್ಪ ಕಲಶೆಟ್ಟಿ, ಎಲ್ಲ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾಸ್ಟರ್ ಟ್ರೇನರಗಳು ಮತ್ತು ಇನ್ನೀತರ ಇಲಾಖೆಯ ಅಧಿಕಾರಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande