ಬೆಂಗಳೂರು, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವೆಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಪರಿಣಾಮವಾಗಿ ಉಜನಿ ಹಾಗೂ ವೀರಾ ಜಲಾಶಯಗಳಿಂದ ಭೀಮಾ ನದಿಗೆ 2.90 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ವಿಜಯಪುರ ಜಿಲ್ಲೆಯ ಭೀಮಾ ನದಿ ಪಾತ್ರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ಆಲಮೇಲ ತಾಲ್ಲೂಕಿನ ತಾವರಖೇಡ ಗ್ರಾಮದಲ್ಲಿ ನದಿಯಲ್ಲಿ ಸಿಲುಕಿದ್ದ 8 ಜನರನ್ನು ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ದೋಣಿಯ ಮೂಲಕ ರಕ್ಷಿಸಿದ್ದಾರೆ.
ತಾವರಖೇಡ ಗ್ರಾಮವನ್ನು ಭೀಮಾ ನದಿಯ ನೀರು ಸುತ್ತಲು ಕಾರಣವಾಗಿ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ.
ಇನ್ನೂ ಕಲಬುರಗಿ ಜಿಲ್ಲೆಯ ಗಾಣಗಾಪೂರದ ಸಂಗಮ ಕ್ಷೇತ್ರ ಜಲಾವೃತಗೊಂಡಿದ್ದು, ರೈತರ ಜಮೀನಿಗೆ ನೀರು ನುಗ್ಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಮಳೆಯ ಹಿನ್ನೆಲೆ ಜಿಲ್ಲಾಧಿಕಾರಿ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಿದ್ದಾರೆ. ಈ ಮೂಲಕ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಿಡಿಪಿಐ ಸೂರ್ಯಕಾಂತ ಮದಾನೆ ಸುತ್ತೋಲೆ ಮೂಲಕ ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಕಿತ್ತಳೆ ಎಚ್ಚರಿಕೆ ಘೋಷಿಸಲಾಗಿದೆ.
ದಸರಾ ರಜೆ ವೇಳೆ ಕೆಲವು ಶಾಲೆಗಳು ವಿನಾಯಿತಿಯಿಂದ ಕಾರ್ಯನಿರ್ವಹಿಸುತ್ತಿದ್ದರೂ, ಪ್ರವಾಹ ಪೀಡಿತ ಪ್ರದೇಶದಲ್ಲಿ ಸುರಕ್ಷತೆಯನ್ನು ಖಾತರಿಪಡಿಸಲು ಶೇಷ ಶಾಲೆಗಳಿಗೆ ಎರಡು ದಿನದ ರಜೆ ನೀಡಲಾಗಿದೆ. ರಜೆಯ ಅವಧಿಯ ಪಾಠವನ್ನು ಮುಂದಿನ ದಿನಗಳಲ್ಲಿ ಸರಿಹೊಂದಿಸುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದ ಉಜನಿ, ವೀರಾ ಜಲಾಶಯಗಳಿಂದ ನಿರಂತರವಾಗಿ ನೀರು ಬಿಡುತ್ತಿರುವ ಪರಿಣಾಮವಾಗಿ ಭೀಮಾ ನದಿ ಅಪಾಯಕಾರಿ ಮಟ್ಟಕ್ಕೇರಿದೆ. ದೇವಣಗಾಂವನ ಆಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಹಳೆಯ ತಾವರಖೇಡ ಗ್ರಾಮ, ಗಾಣಗಾಪೂರ ಸಂಗಮ ಕ್ಷೇತ್ರದ ಪಾರಾಯಣ ಮಂಟಪ, ಫತ್ತರಗ ಗ್ರಾಮದ ಪಶುಸಂಗೋಪನಾ ಆಸ್ಪತ್ರೆ, ಮಾಹೂರ ಗ್ರಾಮ ಸೇರಿದಂತೆ ಹಲವು ಪ್ರದೇಶ ಜಲಾವೃತಗೊಂಡಿವೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ 3.5 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಸಲಾಗಿದೆ. ಈ ಪ್ರವಾಹದಲ್ಲಿ ಸಿಲುಕಿದ 8 ಜನರನ್ನು ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಯಾದಗಿರಿ, ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಿಗೆ ಭೀಮಾ ನದಿ ನೀರು ನುಗ್ಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮುಂದಿನ 48 ಗಂಟೆಗಳಲ್ಲಿ ಇನ್ನೂ ಭಾರಿ ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa