ಹಂಪಿ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹುಮುಖ್ಯ. ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಹೇಳಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಹಾಸ್ಟೆಲ್ ಜೀವನವು ಮರೆಯಲಾಗದ ಅನುಭವ ನೀಡುತ್ತದೆ. ಸಮಾಜದಲ್ಲಿ ಕೂಡಿ ಬಾಳುವುದು ಹೇಗೆ ಎಂಬುದನ್ನು ಹಾಸ್ಟೆಲ್ ಜೀವನ ಕಲಿಸಿ ಕೊಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‍ಗಳು ಸಹಕಾರಿಯಾಗಿವೆ ಎಂದರು.
ಸಮಯವನ್ನು ಎಂದಿಗೂ ವ್ಯರ್ಥ ಮಾಡಬೇಡಿ, ಸಮಯವೇ ನಿಮಗೆ ಶ್ರೀರಕ್ಷೆ ಎಂದು ಮಾರ್ಮಿಕವಾಗಿ ನುಡಿದರು. ಕೇವಲ ಹಾಸ್ಟೆಲ್ ಜೀವನವೇ ಒಂದು ಜೀವನವಲ್ಲ. ಅದರ ಆಚೆಗೂ ಕೂಡ ಒಂದು ಸುಂದರ ಬದುಕಿದೆ ಎಂದು ವಿದ್ಯಾರ್ಥಿಗಳು ಅರಿತುಕೊಂಡಿರಬೇಕು. ಓದು ಎಂದರೆ ಕೇವಲ ಪುಸ್ತಕ ಅಲ್ಲ, ಪ್ರಪಂಚ ಜ್ಞಾನ ಪಡೆದುಕೊಂಡಾಗ ಮಾತ್ರ ನಿಜವಾದ ನಾಗರಿಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆಯಿಂದ ಸಮಾಜವನ್ನು ಗೆಲ್ಲಬಹುದು. ಹಾಸ್ಟೆಲ್‍ನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ನಿಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ. ಅಮರೇಶ ಯತಗಲ್ ಮಾತನಾಡಿ ವಿದ್ಯಾರ್ಥಿಗಳ ಜೀವನವು ಕಷ್ಟ ಸುಖಗಳ ಸಮಾಗಮವಾಗಿದೆ. ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಆ ಪ್ರತಿಭೆಯನ್ನು ಗುರುತಿಸುವಂತಹ ಪ್ರಾಮಾಣಿಕ ಪ್ರಯತ್ನವು ವಿಶ್ವವಿದ್ಯಾಲಯವು ಮಾಡಲಿದೆ ಎಂದರು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಸಮಾಜಕ್ಕೆ ದಾರಿದೀಪವಾದರೆ ಅದುವೇ ನಿಜವಾದ ಶಿಕ್ಷಣ ಎಂದರು. ಸಮಾಜ ಮತ್ತು ಸಮುದಾಯವನ್ನು ಮೇಲೆ ತರಲು ನಿಮ್ಮ ಶಿಕ್ಷಣವೇ ಆಧಾರ ಸ್ತಂಭವಾಗಿದೆ. ಅನುಭವ ಎನ್ನುವುದು ಒಂದು ದೊಡ್ಡ ಪಾಠ. ಜಗತ್ತಿನ ಯಾವ ವಿಶ್ವವಿದ್ಯಾಲಯವು ಕಲಿಸದ ಪಾಠವನ್ನು ಅನುಭವ ಕಲಿಸುತ್ತದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವೈ.ಎ. ಕಾಳೆ ಅವರು ಮಾತನಾಡಿ, ಆಧುನಿಕ ಜಗತ್ತು ಸ್ಪರ್ಧಾತ್ಮಕ ಯುಗವಾಗಿದೆ. ಬೇರೆ ಬೇರೆ ಪರೀಕ್ಷೆಗಳ ಮೂಲಕ ಸರಕಾರಿ ಹುದ್ದೆಗಳನ್ನು ಪಡೆದುಕೊಂಡು ನಿಮ್ಮ ತಂದೆ ತಾಯಿಯ ಕನಸನ್ನು ನನಸು ಮಾಡಬೇಕು ಎಂದರು. ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದೇವೆ. ಒಬ್ಬ ಗುರುವಿನ ನಿಜವಾದ ಗೆಲುವು ವಿದ್ಯಾರ್ಥಿಗಳ ಸಾಧನೆಯಲ್ಲಿ ಅಡಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಸತಿ ನಿಲಯದ ನಿಲಯಪಾಲಕರಾದ ಮಲ್ಲಿಕಾರ್ಜುನ, ಮಹಾಲಿಂಗಪ್ಪ, ಕೃಷ್ಣಪ್ಪ, ಇತರರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಅನಿಲ್‍ಕುಮಾರ್ ಮಾತನಾಡಿದರು. ಆನಂದ ಪ್ರಾರ್ಥನೆ ಹಾಡಿದರು. ವಿನಯಕುಮಾರ್ ಸ್ವಾಗತಿಸಿದರು. ಮೋಹನ್‍ಕುಮಾರ್ ನಿರೂಪಣೆ, ರಾಜು ವಂದನಾರ್ಪಣೆಯನ್ನು ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್