ಹೊಸಪೇಟೆ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸ್ವಚ್ಚತಾ ಹೀ ಸೇವಾ-2025 ರ ಪಾಕ್ಷಿಕ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತ್ ಮತ್ತು ಹೊಸಪೇಟೆ ತಾಲೂಕು ಪಂಚಾಯತಿ ನಗರ ಸಭೆ ಹೊಸಪೇಟೆ ಸಿಬ್ಬಂದಿಯು ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಇವರು ಸಸಿ ನೆಡುವ ಮೂಲಕ ಗುರುವಾರ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ ಜಿಲ್ಲೆಯಲ್ಲಿ ಸೆಪ್ಟಂಬರ್ -17 ರಿಂದ ಅಕ್ಟೋಬರ -02 ರ ವರೆಗೆ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದ ಭಾಗವಾಗಿ ವಿವಿಧ ಚಟುವಟಿಕೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆಯ ಘಟಕಗಳನ್ನು ನಿರ್ಮಿಸಿ ಸುಸ್ಥಿರ ನೈರ್ಮಲ್ಯಯುಕ್ತ ವಾತಾವರಣವನ್ನು ಸೃಷ್ಟಿಸಲು ಜಿಲ್ಲಾ ಪಂಚಾಯಿತಿಯಿಂದ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕಾರ ನೀಡಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ, ತಮ್ಮ ಮನೆಯ ಬಾಗಿಲಿಗೆ ಬರುವ ಕಸದ ವಾಹನಕ್ಕೆ, ಸ್ವಚ್ಛ ವಾಹಿನಿಗೆ ನೀಡಲು ಕೋರಿದರು ಹಾಗೂ ಈ ಅಭಿಯಾನದ ಮೂಲಕ ಎಲ್ಲಾ ಸಾರ್ವಜನಿಕರು ತಮ್ಮ ಮನೆ ಸುತ್ತಲೂ 3 ತಿಂಗಳಿಗೊಮ್ಮೆ ಶ್ರಮದಾನ ಮಾಡುವ ಮೂಲಕ ಇಡೀ ಜಿಲ್ಲೆಯಲ್ಲಿ ಸುಸ್ಥಿರ ನೈರ್ಮಲ್ಯಯುಕ್ತ ಮತ್ತು ಆರೋಗ್ಯಯುಕ್ತ ಗ್ರಾಮಗಳ ನಿರ್ಮಾಣ ಮಾಡುವಂತೆ ತಿಳಿಸಿದರು.
ಈ ವೇಳೆ ಉಪ ಕಾರ್ಯದರ್ಶಿಗಳಾದ ಕೆ.ತಿಮ್ಮಪ್ಪ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ದೀಪಾ, ಜಿಪಂ ಮುಖ್ಯ ಲೆಕ್ಕಾಧಿಕಾರಿ ರುದ್ರಪ್ಪ ಅಕ್ಕಿ, ಸಹಾಯಕ ಕಾರ್ಯದರ್ಶಿ ವಿ.ಬಿ.ಮೌನೇಶ ಮತ್ತು ಸಹಾಯಕ ಯೋಜನಾಧಿಕಾರಿ ಎಂ.ಉಮೇಶ, ಹೊಸಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಲಂ ಭಾಷಾ ಸೇರಿದಂತೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಜಿಲ್ಲಾ ಸಮಾಲೋಚಕರು ಹಾಗೂ ಜಿಲ್ಲಾ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್