ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು, ಕೇಂದ್ರ ಸಂವಹನ ಇಲಾಖೆ, ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ) ಕೂಡಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ), ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘ (ರಿ), ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಮತ್ತು ಕರ್ನಾಟಕ ಸಂಪಾದಕೀಯರ ಸಂಘ (ರಿ), ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಿಜಯಪುರದಲ್ಲಿಂದು ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ “ವಾರ್ತಾಲಾಪ” ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಲೋಕ ಸಭಾ ಸದಸ್ಯರಾದ ರಮೇಶ ಚಂ. ಜಿಗಜಿಣಗಿ ಅವರು, ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮಾಧ್ಯಮದವರಿಗೆ ತಿಳಿಸಲು ‘ವಾರ್ತಾಲಾಪ’ ಕಾರ್ಯಾಗಾರ ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಂದ ಜನರು ಫಲಾನುಭವಿಗಳಾಗುತ್ತಿದ್ದಾರೆ. ಡಿಜಿಟಲೀಕರಣದಿಂದ ಯೋಜನೆಗಳ ಲಾಭ ಸುಲಭವಾಗಿ ಎಲ್ಲರಿಗೂ ದೊರೆಯುವಂತಾಗಿದೆ. ಆನ್ ಲೈನ್ ಹಣಕಾಸು ವಹಿವಾಟು ನಡೆಸುವ ಅಪ್ಲಿಕೇಶನ್ ಗಳನ್ನು ಜನರು ವ್ಯಾಪಕವಾಗಿ ಬಳಸುತ್ತಿರುವುದು ಅಭಿವೃದ್ಧಿಯ ಸಂಕೇತ ಎಂದು ಹೇಳಿದರು.
ದೇಶದಲ್ಲಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎನ್ನುವ ದೂರದೃಷ್ಟಿಯನ್ನು ಹೊಂದಲಾಗಿದ್ದು, ಇದುವರೆಗೂ ಸುಮಾರು 81 ಕೋಟಿಗೂ ಅಧಿಕ ಮಂದಿಗೆ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ವಾರ್ತಾ ಶಾಖೆಯು ಪತ್ರಕರ್ತರಿಗಾಗಿ ವಾರ್ತಾಲಾಪವನ್ನು ಆಯೋಜಿಸಿರುವುದು ಅಭಿನಂದನಾರ್ಹ. ಇಂತಹ ಕಾರ್ಯಕ್ರಮಗಳಿಂದ ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಶ್ರೀ ಎಸ್.ಜಿ. ರವೀಂದ್ರ ಅವರು ಮಾತನಾಡಿ, ಪತ್ರಕರ್ತರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸುವುದು ‘ವಾರ್ತಾಲಾಪ’ ಕಾರ್ಯಾಗಾರದ ಮುಖ್ಯ ಉದ್ದೇಶ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು ಜಿಲ್ಲೆ, ತಾಲೂಕು, ಗ್ರಾಮಮಟ್ಟದಲ್ಲಿ ಅನುಷ್ಠಾನ ಮಾಡುವಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ. ಸ್ವಚ್ಛತಾ ಹೀ ಸೇವಾ ಅಭಿಯಾನದ ಭಾಗವಾಗಿ ಸೆಪ್ಟೆಂಬರ್ 25ರಂದು ಒಂದೇ ದಿನ 5 ಕೋಟಿ ಜನ ಭಾಗಿಯಾಗಿದ್ದು, 3 ಲಕ್ಷ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ, ಸ್ವಸ್ಥ ನಾರಿ ಸಶಕ್ತ ಪರಿವಾರ, ಪೋಷಣ ಅಭಿಯಾನಗಳು ನಡೆಯುತ್ತಿವೆ. ಅಲ್ಪಸಂಖ್ಯಾತರು ಹೆಚ್ಚಾಗಿ ಇರುವ ಈ ಜಿಲ್ಲೆಯಲ್ಲಿ ಅವರಿಗಾಗಿ ಅನೇಕ ಯೋಜನೆಗಳಿವೆ. ಅದನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮದವರ ಪಾತ್ರ ಹಿರಿದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಆನಂದ್ ಕೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಆಡಳಿತ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಸರ್ಕಾರದ ಯೋಜನೆಗಳನ್ನು ಮತ್ತಷ್ಟು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲಕ್ಷ್ಮಣ ನಿಂಬರಗಿ, ಮಾಧ್ಯಮಗಳು ಸುದ್ದಿ ಬಿತ್ತರಿಸುವ ಮುನ್ನ ಸಾಮಾಜಿಕ ಜವಾಬ್ದಾರಿ ಪಾಲಿಸಬೇಕು. ಸೂಕ್ಷ್ಮ ಘಟನೆಗಳ ವರದಿಗಾರಿಕೆಯ ವೇಳೆ ಕಾನೂನಿನ ಅರಿವಿನೊಂದಿಗೆ ವರದಿ ಮಾಡಿದಾಗ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಿಷಿ ಆನಂದ್, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಗಣನೀಯವಾಗಿದೆ. ಸಮಾಜದಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿದಾಗ ಮಾತ್ರ ನಾವು ಬದಲಾವಣೆ ಕಾಣಲು ಸಾಧ್ಯ ಎಂದು ತಿಳಿಸಿದರು.
ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ, ಕೂಡಗಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂತೋಷ್ ತಿವಾರಿ, ಎನ್.ಟಿ.ಪಿ.ಸಿ. ನಿಗಮ ತನ್ನ ಸಾಮಾಜಿಕ ಹೊಣೆಗಾರಿಕೆ ನೀತಿಯಡಿ ಅನೇಕ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸೈಕಲ್, ಶೈಕ್ಷಣಿಕ ಸಾಮಗ್ರಿಗಳು, ಮಹಿಳೆಯರಿಗೆ ಹೊಲಿಗೆ ಯಂತ್ರ, ಶೌಚಾಲಯಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ‘ಜಿ.ಎಸ್.ಟಿ. 2.0’ ಕುರಿತು ಸಿಜಿಎಸ್‌ಟಿ ವಿಜಯಪುರ ವಿಭಾಗದ ಸಹಾಯಕ ಆಯುಕ್ತರಾದ ಶ್ರೀ ವಾಯ್.ಸಿ. ಪೂಜಾರಿ, ‘ಸ್ವಸ್ಥ ನಾರಿ ಸಶಕ್ತ ಪರಿವಾರ’ ಅಭಿಯಾನ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ್ ಕುಮಾರ್ ಗುಣಾರಿ, ‘ಕೃಷಿ ತೋಟಗಾರಿಕಾ ವಲಯದ ಯೋಜನೆಗಳ ಅನುಷ್ಠಾನ’ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಶಿವನಗೌಡ ಎಸ್. ಪಾಟೀಲ್, ‘ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ’ ಕುರಿತು ಕೆನರಾ ಬ್ಯಾಂಕ್ ಮತ್ತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಬಿ. ಸಿದ್ದಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಪೋಷಣಾ ಅಭಿಯಾನದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಸಂಯೋಜಕರಾದ ಶ್ರೀಮತಿ ಭಾರತಿ ಪಾಟೀಲ್, ಹೃದಯ ರೋಗಗಳ ಕುರಿತು ಹೃದ್ರೋಗ ತಜ್ಞರಾದ ಡಾ. ಶಂಕರಗೌಡ ಪಾಟೀಲ ಅವರು ಮಾಹಿತಿ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರಕಾಶ್ ಜಿ. ಬೆಣ್ಣೂರ, ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಈರ್ಫಾನ್ ಶೇಖ್, ಪತ್ರಕರ್ತರ ಧ್ವನಿ ಸಂಘದ ಕರ್ನಾಟಕ ಕಾರ್ಯನಿರತ ಅಧ್ಯಕ್ಷರಾದ ಶ್ರೀ ಗುರುರಾಜ್ ಹೂಗಾರ್, ಕರ್ನಾಟಕ ರಾಜ್ಯ ಮಹಿಳಾ ಸಂಪಾದಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / jyothi deshpande