ಬಳ್ಳಾರಿ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮತ್ತು ಮೂರು ದಶಕಗಳ ಸೇವೆಯನ್ನು ಗುರುತಿಸುವ ಅಂಗವಾಗಿ `ಎಲ್ಲರಿಗೂ ನ್ಯಾಯ, ಕಾನೂನು ನೆರವಿನ ಲೆನ್ಸ್ ಮೂಲಕ’ ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಛಾಯಾಗ್ರಹಣ ಮತ್ತು ಕಲಾ ಪ್ರದರ್ಶನವನ್ನು ನವೆಂಬರ್ 8 ಮತ್ತು 9 ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದೆ.
ನ್ಯಾಯದ ಪಥವನ್ನು ಮುನ್ನಡೆಸುವಲ್ಲಿ ಕಾನೂನು ನೆರವಿನ ಪಾತ್ರವನ್ನು ಸೃಜನಶೀಲ ಅಭಿವ್ಯಕ್ತಿಯ ಮೂಲಕ ಎತ್ತಿತೋರಿಸುವುದು ಮತ್ತು ಕಾನೂನು ಸೇವೆಗಳಿಂದ ಪ್ರಯೋಜನ ಪಡೆಯುವವರ ವಾಸ್ತವಗಳ ಬಗ್ಗೆ ಸಮಾಜವನ್ನು ಸಂವೇದನಶೀಲಗೊಳಿಸುವುದು ಇದರ ಉದ್ದೇಶವಾಗಿದೆ.
ದೈನಂದಿನ ಹೋರಾಟಗಳು, ದಿಟ್ಟತನ ಮತ್ತು ಕಾನೂನು ಸಹಾಯದಿಂದ ಸಕ್ರಿಯಗೊಳಿಸಲಾದ ಸಬಲೀಕರಣದ ಕಥೆಗಳನ್ನು ಬಿಂಬಿಸುವ ಛಾಯಾಚಿತ್ರಗಳು, ವರ್ಣಚಿತ್ರಗಳು, ರೇಖಾಚಿತ್ರಗಳು ಮತ್ತು ವೀಡಿಯೋಗಳನ್ನು (ಗರಿಷ್ಠ ಅವಧಿ 1 ನಿಮಿಷ) ಕಾನೂನು ನೆರವು ವೃತ್ತಿಪರರು, ಕಾನೂನು ಸಮುದಾಯದ ಸದಸ್ಯರು, ವಿದ್ಯಾರ್ಥಿಗಳು, ಪ್ಯಾರಾ-ಲೀಗಲ್ ಸ್ವಯಂ ಸೇವಕರು ಮತ್ತು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ.
ಜಿಲ್ಲೆಯ ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ಸಂಪಾದಕರು ಸಹ ಈ ಕಲಾಪ್ರದಶರ್ನದಲ್ಲಿ ಭಾಗವಹಿಸಬಹುದು.
ಪ್ರಕಟಗೊಂಡ ಛಾಯಾಚಿತ್ರಗಳು, ವರ್ಣಚಿತ್ರಗಳು, ರೇಖಾಚಿತ್ರಗಳು ಮತ್ತು ವೀಡಿಯೋಗಳನ್ನು ರಾಷ್ಟ್ರೀಯ ಅಧಿವೇಶನದಲ್ಲಿ ಪ್ರದರ್ಶಿಸಲಾಗುವುದು ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಗೌರವಿಸಲಾಗುವುದು.
ಛಾಯಾಚಿತ್ರಗಳು, ವರ್ಣಚಿತ್ರಗಳು, ರೇಖಾಚಿತ್ರಗಳು ಮತ್ತು ವೀಡಿಯೋಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಲು ಅಕ್ಟೋಬರ್ 04 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯ ಸಂಕೀರ್ಣದ 3 ನೇ ಮಹಡಿಯ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ ಅಥವಾ ದೂ.08392-278077 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್