ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವಶ್ರೇಷ್ಠ ಕಂಪನಿಗಳಲ್ಲಿ ಉತ್ತರ ಕರ್ನಾಟಕದ ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ಒದಗಿಸಲು ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಹೇಳಿದ್ದಾರೆ.
ಇಂದು ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಫೋನ್ ತಯಾರಿಸುವ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್‌ಕಾನ್-ಹಾನ್ ಹೈ ಟೆಕ್ನಾಲಜಿ ಕಂಪನಿ 2024 ಮತ್ತು 2025ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಇ ಮತ್ತು ಡಿಪ್ಲೊಮಾ ಕೋರ್ಸುಗಳಲ್ಲಿ ಮೆಕ್ಯಾನಿಕಲ್, ಎಲೇಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮತ್ತು ಎಲೇಕ್ಟ್ರಾನಿಕ್ಸ್ ಎಲೆಕ್ಟ್ರೀಕಲ್ಸ್ ವಿಭಾಗಗಳಲ್ಲಿ ಉತ್ತೀರ್ಣರಾದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಎಂಜಿನಿಯರಿಂಗ್ ಪದವಿಧರರು ಅಂತಾರಾಷ್ಟ್ರೀಯ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕು ಎಂಬುದು ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಕನಸಾಗಿದೆ. ಅವರ ಪ್ರಯತ್ನದ ಫಲವಾಗಿ ಈಗ ಫಾಕ್ಸಕಾನ್ ಕಂಪನಿ ಅಧಿಕಾರಿಗಳು ಇಲ್ಲಿಗೆ ಬಂದು ಉದ್ಯೋಗ ಮೇಳ ನಡೆಸಿದ್ದಾರೆ. ಅಲ್ಲದೇ, ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆಯುವ ಯುವಕರಿಗೆ ನಾನಾ ಕಂಪನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಈ ಭಾಗದಲ್ಲಿ ಸಾಕಷ್ಟು ಜನ ಪ್ರತಿಭಾವಂತ ಮತ್ತು ಅರ್ಹ ಪದವಿಧರ ಯುವಕರಿದ್ದಾರೆ. ಈ ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಉದ್ಯೋಗ ಪಡೆಯಲು ಉತ್ತಮ ವಾತಾವರಣ ಸೃಷ್ಠಿಸಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು ರೂ. 10 ಲಕ್ಷ ಕೋ. ಬಂಡವಾಳ ಹೂಡಿಕೆ ಮಾಡಲು ಒಪ್ಪಂದವಾಗಿದೆ. ಇದರಲ್ಲಿ ಶೇ. 70ಕ್ಕೂ ಹೆಚ್ಚು ಕಂಪನಿಗಳು ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೂಡಿಕೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರ ದೂರದೃಷ್ಠಿಯ ಫಲವಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಬೃಹತ್ ಉದ್ಯೋಗ ಮೇಳದಲ್ಲಿ 600 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಫಾಕ್ಸ್ ಕಾನ್ ಕಂಪನಿಯ ಹಿರಿಯ ಕಾರ್ಯ ನಿರ್ವಾಹಕರಾದ ಸತೀಶಕುಮಾರ ಆರ್., ಗುಡೂರು ವೆಂಕಟೇಶಸ ಕಾರ್ಯ ನಿರ್ವಾಹಕ ಪೃಥ್ವಿಕುಮಾರ ಬಿ. ಕೆ. ಹಾಗೂ ಮತ್ತು ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು, ಕಾಲೇಜಿನ ಉದ್ಯೋಗಾಧಿಕಾರಿ ಪ್ರೊ. ಪ್ರಶಾಂತ ಪಾಟೀಲ ಮತ್ತು ಅವರ ತಂಡ, ಡಾ. ಲೀನಾ ರಾಘಾ, ಡಾ. ಪ್ರದೀಪ ಮಾಳಜಿ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪ್ರೊ. ಪ್ರಭುದೇವ ಕಳಸಗೊಂಡ ಉಪಸ್ಥಿತರಿದ್ದರು.
ಕಾಲೇಜಿನ ನಿರ್ದೇಶಕ ಡಾ. ವಿ. ಜಿ. ಸಂಗಮ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಮಂಜುನಾಥ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅನುರಾಧಾ ಟಂಕಸಾಲಿ ನಿರೂಪಿಸಿದರು. ಡಾ. ಲೀನಾ ರಾಘಾ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande