ಬಳ್ಳಾರಿ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೆಲವು ದಿನಗಳಿಂದ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಶುಕ್ರವಾರ, ಬಳ್ಳಾರಿ ತಾಲ್ಲೂಕಿನ ಶಿಡಿಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯಾಧಿಕಾರಿಗಳು, ಆಶಾಕಾರ್ಯಕರ್ತೆಯರೊಂದಿಗೆ ಚರ್ಚಿಸಿ ಅವರು ಮಾತನಾಡಿದರು.
ಮನೆಯ ಸುತ್ತಮುತ್ತ ನೀರು ನಿಲ್ಲುವುದರಿಂದ ಸೊಳ್ಳೆಗಳ ತಾಣಗಳಾಗುತ್ತವೆ. ಇದರಿಂದ ಸಾಂಕ್ರಾಮಿಕ ರೋಗಗಳಾದ ವಾಂತಿ-ಬೇದಿ,ü ಟೈಫಾಯಿಡ್ ಮತ್ತು ಸೊಳ್ಳೆಯಿಂದ ಹರಡುವ ಕಾಯಿಲೆಗಳಾದ ಡೆಂಗ್ಯೂ, ಚಿಕುನ್‍ಗುನ್ಯಾ, ಮಲೇರಿಯಾ ಮುಂತಾದ ಕಾಯಿಲೆಗಳು ಕಂಡುಬರುವ ಸಾಧ್ಯತೆಗಳು ಇವೆ ಎಂದು ತಿಳಿಸಿದರು.
ಜ್ವರ ಪ್ರಕರಣಗಳ ಪತ್ತೆಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಕೈಗೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಡೆಂಗ್ಯೂ, ಚಿಕಿನ್ ಗುನ್ಯಾ, ಮಲೇರಿಯಾ ಮುಂತಾದವುಗಳ ನಿಯಂತ್ರಣ ಜೊತೆಗೆ ಟೈಪಾಯಿಡ್ ಗುರ್ತಿಸುವಿಕೆಯನ್ನು ಸಹ ಮಾಡಲಾಗುತ್ತಿದ್ದು, ಯಾವುದೇ ಜ್ವರವಿದ್ದರೂ ಸಹ ನಿರ್ಲಕ್ಷ ಮಾಡದೇ ಆಸ್ಪತ್ರೆಗೆ ಭೇಟಿ ನೀಡಿ ಜ್ವರದ ಸ್ವರೂಪವನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯಲು ಮುಂದೆ ಬರಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ವಾತಾವರಣ ಬದಲಾವಣೆಯು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಸೊಳ್ಳೆಗಳು ರೋಗವಾಹಕಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ನೀರು ಮತ್ತು ಆಹಾರದಿಂದ ಹರಡುವ ರೋಗಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಮನುಷ್ಯನ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ ಎಂದರು.
ಮಳೆಯಿಂದ ಕುಡಿಯುವ ನೀರು ಕಲುಷಿತವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಕುದಿಸಿ ಆರಿಸಿ ನೀರು ಕುಡಿಯಬೇಕು. ವಾತಾವರಣ ಬದಲಾವಣೆಯು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾತಾವರಣ ಬದಲಾವಣೆ ಹಿನ್ನಲೆ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಡಿಎನ್‍ಒ ಗಿರೀಶ್, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಆಶಾಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್