ಮೈಸೂರು, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಸಾಹಿತ್ಯದ ಮಹಾನ್ ಹರಿಕಾರ ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಪಂಚಭೂತಗಳಲ್ಲಿ ಲೀನವಾಗಿದ್ದು, ತಮ್ಮ ಬದುಕಿನ ಯಾನವನ್ನು ಮುಗಿಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಪಾರ್ಥಿವ ಶರೀರಕ್ಕೆ ಮೊದಲಾಗಿ ಮಾನಸ ಪುತ್ರಿ ಸಹನಾ ವಿಜಯಕುಮಾರ್ ಅಂತಿಮ ನಮನ ಸಲ್ಲಿಸಿದ ನಂತರ, ಪುತ್ರರಾದ ರವಿಶಂಕರ್,ಉದಯಶಂಕರ್ ಅಗ್ನಿಸ್ಪರ್ಶ ನೆರವೇರಿಸಿದರು.
ಭೈರಪ್ಪನವರ ಪಾರ್ಥಿವ ಶರೀರಕ್ಕೆ ತ್ರಿವರ್ಣಧ್ವಜ ಹೊದಿಸಿ, ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ನೀಡಲಾಯಿತು. ನಂತರ ಪೊಲೀಸ್ ಬ್ಯಾಂಡ್ ಹಾಗೂ ರಾಷ್ಟ್ರಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಸಲಾಯಿತು.
ಅಂತ್ಯಕ್ರಿಯೆಯಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಸಚಿವ ಪ್ರಹ್ಲಾದ ಜೋಶಿ,ರಾಜ್ಯ ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಎಸ್.ಎಲ್. ಭೈರಪ್ಪ ಕನ್ನಡ ಸಾಹಿತ್ಯ ಲೋಕದಲ್ಲಿ ಅಕ್ಷರಗಳ ಮಾಂತ್ರಿಕನಾಗಿ ಯುವಕರಲ್ಲಿ ಸಾಹಿತ್ಯ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.
ಎಸ್.ಎಲ್. ಭೈರಪ್ಪ ಅವರು ತಮ್ಮ ದೀರ್ಘ ಸಾಹಿತ್ಯ ಜೀವನದಲ್ಲಿ 25 ಕಾದಂಬರಿಗಳು, 6 ಪ್ರಬಂಧ ಸಂಕಲನಗಳು, 1 ಆತ್ಮಚರಿತ್ರೆ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ಕಾದಂಬರಿಗಳ ಆಧಾರದಲ್ಲಿ 4 ಚಲನಚಿತ್ರಗಳೂ ಮೂಡಿಬಂದಿವೆ. ಅವರ ಕೆಲ ಕಾದಂಬರಿಗಳು ೪೦ ಭಾಷೆಯಲ್ಲಿ ಅನುವಾದಗೊಂಡಿವೆ.
ದಶಕಗಳ ಕಾಲ ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿಸಿದ ಭೈರಪ್ಪರ ಅಗಲಿಕೆ, ಕರುನಾಡಿಗೆ ತುಂಬಲಾರದ ನಷ್ಟವೆಂದು ಸಾಹಿತ್ಯ ವಲಯ ಶೋಕ ವ್ಯಕ್ತಪಡಿಸಿದೆ. ಇದೇ ವೇಳೆ ಭೈರಪ್ಪನವರ ಸ್ಮರಣಾರ್ಥ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ರಾಜ್ಯ ಸರಕಾರ ಘೋಷಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa