ಬಳ್ಳಾರಿ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆ ಎಂದರೆ ಕೇವಲ ಗಣಿ ಪ್ರದೇಶ ಮಾತ್ರವಲ್ಲ; ಭಾರತೀಯ ಪುರಾತತ್ವ ಪಾರಂಪರಿಕಾ ಪಟ್ಟಿಗೆ ಸೇರಿದ ಪ್ರವಾಸೋದ್ಯಮ ಸ್ಥಳಗಳೂ ಸಹ ಒಳಗೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘ, ರಾಬರ್ಟ್ ಬ್ರೂಸ್‍ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಂಡೂರು ಡೈರೀಸ್ ಇವರ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಗರದ ಐತಿಹಾಸಿಕ ಕೋಟೆ ಪ್ರವೇಶ ದ್ವಾರ ಅವರಣದಲ್ಲಿ ಶುಕ್ರವಾರ ನಡೆದ ಬಳ್ಳಾರಿ ಕೋಟೆಯ ಪಾರಂಪರಿಕ ನಡಿಗೆಗೆ ಪೋಟೋ ಪಾಯಿಂಟ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳಾದ ಬಳ್ಳಾರಿಯ ಏಕಾಶಿಲ ಬೆಟ್ಟ (ಕೋಟೆ), ಸಂಗನಕಲ್ಲು ಗುಡ್ಡ, ರಾಬರ್ಟ್ ಬ್ರೂಸ್‍ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯ, ಅವಂಬಾವಿ, ಮಿಂಚೇರಿ ಬೆಟ್ಟ, ದರೋಜಿ ಕರಡಿಧಾಮ, ಸಂಡೂರಿನ ಕುಮಾರಸ್ವಾಮಿ ದೇವಾಲಯ ಮತ್ತು ನಾರಿಹಳ್ಳ ಜಲಾಶಯ, ಕುರುಗೋಡು ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ, ಭತ್ತದ ನಾಡು ಎಂದೇ ಖ್ಯಾತಿ ಪಡೆದ ಸಿರುಗುಪ್ಪ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಸಂಡೂರನ್ನು ನೋಡುತ್ತಿದ್ದರೆ ಎಂತಹವರು ಸಹ ಆಕರ್ಷಣೆಗೆ ಒಳಗಾಗುತ್ತಾರೆ. ಪ್ರಮುಖರು ಹೇಳಿದಂತೆ, ಸೆಪ್ಟಂಬರ್ ನಲ್ಲಿ ಸಂಡೂರು ನೋಡು (ಸಿ ಸಂಡೂರ್ ಇನ್ ಸೆಪ್ಟೆಂಬರ್) ಎನ್ನುವ ಮಾತಿನಂತೆ ಸೆಪ್ಟೆಂಬರ್ ನಲ್ಲಿ ತಪ್ಪದೇ ಸಂಡೂರು ಭಾಗಕ್ಕೆ ಭೇಟಿ ನೀಡಿ ಪ್ರಕೃತಿಯ ಸೊಬಗು ಸವಿಯಬೇಕು ಎಂದರು.
ಬಳ್ಳಾರಿ ನಗರದ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯವು ದಕ್ಷಿಣ ಭಾರತದಲ್ಲಿಯೇ ವಿಶೇಷ ಪ್ರಾಚೀನ ಕಾಲದಲ್ಲಿ ಮಾನವನ ಅವಶೇಷಗಳನ್ನು ಕಲೆ ಹಾಕಿದ ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಅಂತರಾಷ್ಟ್ರೀಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಉಪಯುಕ್ತವಾಗಿದೆ ಎಂದು ಹೇಳಿದರು.
ಅದೇರೀತಿಯಾಗಿ ಜಿಲ್ಲೆಯಲ್ಲಿ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ವಾಸ್ತುಶಿಲ್ಪ ಹೊಂದಿದ ದೇವಸ್ಥಾನಗಳನ್ನು ಕಾಣಬಹುದಾಗಿದ್ದು, ಧಾರ್ಮಿಕ ದೇವಾಲಯಗಳು ಮತ್ತು ಪಾರಂಪರಿಕ ತಾಣಗಳನ್ನು ಕಾಪಾಡುವ ಮೂಲಕ ಹೆಚ್ಚಿನ ಪ್ರಚಾರ ನೀಡಿ, ಜಿಲ್ಲೆಯನ್ನು ಪ್ರವಾಸೋದ್ಯಮ ಅಭಿವೃದ್ಧಿ ತಾಣವನ್ನಾಗಿ ಮಾಡಲು ಪ್ರೋತ್ಸಾಹಿಸೋಣ ಎಂದು ಕರೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ.ಎಸ್ ತಳಕೇರಿ, ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಸದಸ್ಯ ಅಹೀರಾಜ್.ಎಂ., ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ವಿಕ್ರಂ ಪೋಲ, ಹಿರಿಯ ಪ್ರವಾಸಿ ಪ್ರವರ್ತಕ ಶ್ರೀಹರಿ.ಎಂ, ಸಂಡೂರು ಡೈರೀಸ್ ತಂಡದ ಸದ್ಯಸರು, ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ, ಪ್ರವಾಸಿ ಮಿತ್ರರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್