ಶ್ರೀಯುತ ಎಸ್ ಎಲ್ ಭೈರಪ್ಪನವರು - ಭಾವ ಪೂರ್ಣ ಶ್ರದ್ಧಾಂಜಲಿ
ಶ್ರೀಯುತ ಎಸ್ ಎಲ್ ಭೈರಪ್ಪನವರು - ಭಾವ ಪೂರ್ಣ ಶ್ರದ್ಧಾಂಜಲಿ
ಎಮ್ ‌ ವಿಜಯ ಕುಮಾರ್ ‌, ಪಿ ಹೆಚ್ ‌ ಡಿ ( ಏರೋಸ್ಪೇಸ್ ‌ ಇಂಜಿನಿಯರಿಂಗ್)


ಶ್ರೀಯುತ ಎಸ್ ಎಲ್ ಭೈರಪ್ಪನವರು ಕನ್ನಡದ ಪ್ರಸಿದ್ಧ ಕಾದಂಬರಿಕಾರರು.

ನಾನು ಮೈಸೂರಿನ ರೀಜನಲ್ ಕಾಲೇಜಿನಲ್ಲಿ M.Sc.Ed.( Physics) ಓದುತ್ತಿದ್ದಾಗ, ಭೈರಪ್ಪನವರು ಅಲ್ಲಿ Head of the Department of Education ಹಾಗೂ ಪ್ರಾಧ್ಯಪಕರಾಗಿದ್ದರು. ಅವರು ನಮಗೆ Education Subject ಪಾಠ ಮಾಡುತ್ತಿದ್ದರು. ಕುಳಿತು ಕೊಂಡೇ ಉಪನ್ಯಾಸ ಮಾಡುತ್ತಿದ್ದರು. ನಿರರ್ಗಳವಾದ ಇಂಗ್ಲೀಷು. ಸ್ವಲ್ಪ ಗ್ರಾಂಥಿಕ ಭಾಷೆ. ಉದ್ದುದ್ದ ವಾಕ್ಯಗಳು. ಆದರೆ ಎಲ್ಲರಿಗೂ ಅರ್ಥವಾಗುತ್ತಿತ್ತು. ಗಂಭೀರವಾದ ಪಾಠಗಳು. ಒಳ್ಳೆಯ ಮೂಡಿದ್ದರೆ ತೆಳುವಾದ, ಸೂಕ್ಷ್ಮವಾದ ಹಾಸ್ಯ. ಹಾಜರಿ ಕೂಗುವಾಗ, ಧನಲಕ್ಷ್ಮಿ ಎಂದು ಕರೆದಾಗ, “ಅಲ್ಲಮ್ಮ , ಲಕ್ಷ್ಮೀ ಎಂದರೆ ಎಲ್ಲ ಲಕ್ಷ್ಮಿಗಳು ಆಗುತ್ತಿತ್ತು ಅಲ್ಲವೇ, ಧಾನ್ಯ ಲಕ್ಷ್ಮಿ, ಶ್ರೀಲಕ್ಷ್ಮಿ , ಗುಣಲಕ್ಷ್ಮಿ, ಇತ್ಯಾದಿ. ನೀವು ಸೂಕ್ಷಮತಿಗಳಾಗಿದ್ದರೆ ಹಾಸ್ಯ ಅರ್ಥವಾದೀತು.

ಯಾವಾಗಲೂ ಗಂಭೀರವಾಗಿರುತ್ತಿದ್ದರು. ಆದರೆ ಸಿಟ್ಟು ಮಾಡುತ್ತಿರಲಿಲ್ಲ. ಜಾತೀಯತೆ ಯಾವತ್ತೂ ಮಾಡುತ್ತಿರಲಿಲ್ಲ. ಯಾವತ್ತೂ ವಿದ್ಯಾರ್ಥಿಗಳ ಪರವಾಗಿರುತ್ತಿದ್ದರು. ಅವರ ಕೋಣೆಯ ಬಾಗಿಲು ಸುಮಾರಾಗಿ ಹಾಕಿರುತ್ತಿತ್ತು. ಅವರ ಆಫೀಸಿನ ಗುಮಾಸ್ತರ ಹತ್ತಿರ ಮೊದಲೇ ಹೇಳಿ appointment ತೆಗೆದುಕೊಂಡು ಅವರ ಭೇಟಿ ಆಗಬಹುದಿತ್ತು. ನಾವು ಕೆಲವು ವಿದ್ಯಾರ್ಥಿಗಳು ಅವರಿಗೆ ಹತ್ತಿರವಾಗಿದ್ದೆವು. ಅವರ ಕಾದಂಬರಿಗಳನ್ನು ಓದಿದ್ದ ನಮಗೆ ಭೈರಪ್ಪನವರನ್ನು ಕಂಡರೆ ಭಯ ಮಿಶ್ರಿತ ಗೌರವ.

ಒಮ್ಮೆ (1977-1980), ನಾನು ರಜೆಗೆ ಮನೆಗೆ ತೀರ್ಥಹಳ್ಳಿಗೆ ಹೋಗಿದ್ದಾಗ, ನನಗೆ ನೆನಪಿರುವಂತೆ, ಶರತ್ ಕಲ್ಕೋಡ್ ಅವರು ಜೇನುತುಪ್ಪ ಕೊಟ್ಟಿದ್ದರು- ಭೈರಪ್ಪ ನವರಿಗೆ ತಲುಪಿಸ ಬೇಕಿತ್ತು. ನನ್ನ ಅವಳಿ ಸಹೋದರ ಡಾ ಉದಯ ಕುಮಾರ್ (ಅವನು ಮಾನಸ ಗಂಗೋತ್ರಿಯಲ್ಲಿ ಎಮ್ ಎಸ್ ಸಿ ರಾಸಾಯನ ಶಾಸ್ತ್ರ ಓದುತ್ತಿದ್ದನು) ಮತ್ತು ನಾನು , ಬೈರಪ್ಪನವರ ಮನೆಗೆ ಹೋಗಿದ್ದೆವು. ನಮಗೆ ಇದು ಸುವರ್ಣ ಅವಕಾಶ. ಬಹಳ ಉತ್ಸಾಹ, ಸಂಭ್ರಮದಿಂದ ಹೋಗಿದ್ದೆವು. ನಮ್ಮನ್ನು ಆದರಿಸಿದರು, ಸುಮಾರು ಎರಡು ಗಂಟೆಗಳ ಕಾಲ ಇದ್ದೆವು. ಅವರ ಮಕ್ಕಳ ಬಗ್ಗೆ ಹೇಳಿದರು. ಒಬ್ಬ ಮಗನ ಹಾವಳಿ ತಡೆಯಲಾರದೆ, ಮಂಗಳೂರಿನ ಹತ್ತಿರ ಅಳಿಕೆಯಲ್ಲಿರುವ ಶಾಲೆಗೆ ಸೇರಿಸಿದ್ದರು. ಮಕ್ಕಳನ್ನು ಹೇಗೆ ಸಾಕುವುದು, Education phylosophy. ಅದನ್ನು ಅನುಷ್ಠಾನಕ್ಕೆ ತರುವಾಗ ಆಗುವ ತೊಂದರೆಗಳು, ಇತ್ಯಾದಿ. ನಾವು ಅವಳಿ ಜವಳಿ ಎಂದಾಗ, ಅವರು ಯಾರು ದೊಡ್ಡವರು ಅಂತ ಕೇಳಿದರು. ಜೊತೆಗೆ ಅವಳಿ ಸೋದರರಲ್ಲಿ ಇರುವ - ಪಿತೃ ಜೇಷ್ಠ ಹಾಗೂ ಮಾತೃ ಜೇಷ್ಠ - ಪರಿಕಲ್ಪನೆಗಳನ್ನು ವಿವರಿಸಿದ್ದರು. ಅವರಿಗೆ ವಿಜ್ಞಾನದ ಬಗ್ಗೆ ಬಹಳ ಆಸಕ್ತಿ ಇತ್ತು. ಉತ್ತಮವಾಗಿ ಓದಿಕೊಂಡಿದ್ದರು.

1980 ರ ಫೆಬ್ರವರಿ 16 ನೇ ತಾರೀಖಿನಂದು ಭಾರತದಲ್ಲಿ ಖಗ್ರಾಸ ಸೂರ್ಯಗ್ರಹಣ ಆಗಿತ್ತು. ಅದು ಸ್ಪಷ್ಟವಾಗಿ ಗೋಚರಿಸುವುದು ಹುಬ್ಬಳ್ಳಿ-ಧಾರವಾಡ ದಲ್ಲಿ. ನಮ್ಮ ಭೌತಶಾಸ್ತ್ರದ ಪ್ರಾಧ್ಯಾಪಕರಾದ ಫ್ರೊ ಮಹೇಶ್ವರಿ ಮತ್ತು ಫ್ರೊ ದತ್ತ ಅವರು ಕುಟುಂಬ ಸಹಿತ ಮೈಸೂರಿನಿಂದ ಕಾರಿನಲ್ಲಿ ಹೋಗುತ್ತಿದ್ದರು. ಇವರಿಬ್ಬರೂ

ಅಮೆರಿಕದಲ್ಲಿ ಪಿ ಹೆಚ್

ಡಿ ಓದಿ ಮರಳಿ ಬಂದವರು. ಭೈರಪ್ಪನವರೂ ಅವರ ಜೊತೆಗೆ ಹೋಗುವವರು. ಭೈರಪ್ಪನವರಿಗೆ ನನ್ನ ಮೇಲೆ ಬಹಳ ಪ್ರೀತಿ. ನನ್ನನ್ನು ಒತ್ತಾಯದಿಂದ ಜೊತೆಗೆ ಕರೆದು ಕೊಂಡು ಹೋದರು. ಅಲ್ಲಿ ಕನ್ನಡ ಬಲ್ಲವರು ನಾವಿಬ್ಬರೇ. ಆ ದಿಗ್ಗಜರ ಜೊತೆ ಎರಡು ದಿನ ವಿದ್ವತ್ ಪೂರ್ಣ ಚರ್ಚೆಗಳು , ವಿವಿಧ ವಿಷಯಗಳ ಜ್ಞಾನದ ಸವಿದೌತಣ. ಫ್ರೊ ಮಹೇಶ್ವರಿ ಯವರ ತಂದೆಯವರು IAS ಆಗಿದ್ದು ನಿವೃತ್ತರಾಗಿದ್ದರು. ಅದರ ಬಗ್ಗೆ, ಮಹೇಶ್ವರಿಯವರು ಅಮೇರಿಕದಿಂದ ವಾಪಾಸು ಬಂದಿದ್ದು, ಉತ್ತರ ಭಾರತದ ಜಾತಿ ಪದ್ಧತಿ , ಬೈರಪ್ಪನವರ ಬಾಲ್ಯ, ವಿಜ್ಞಾನ, ಇತ್ಯಾದಿ ವಿಷಯಗಳು ಬರುತ್ತಿದ್ದವು.

ಭೈರಪ್ಪನವರು ಬಾಲ್ಯದಲ್ಲಿ ಅಪಾರ ಕಷ್ಟ ಅನುಭವಿಸಿದವರು. ಅವರಿಗೆ ಪುರಾಣಗಳಲ್ಲಿ ನಂಬಿಕೆ ಇರಲಿಲ್ಲ. ನನಗೆ ತಿಳಿದಂತೆ ಅವರು ವೈಜ್ಞಾನಿಕವಾಗಿ ವಿಚಾರ ಮಾಡುವವರು.

ನಾನು ಎರಡನೇ ಸ್ನಾತಕೋತ್ತರ ಪದವಿಗೆ ( ಎಂ ಟೆಕ್)‌ , ಬೆಂಗಳೂರಿನಲ್ಲಿರುವ ಐ ಐ ಎಸ್

ಸಿ (ಭಾರತೀಯ ವಿಜ್ಞಾನ ಮಂದಿರ) ಯಲ್ಲಿ ಓದುತ್ತಿರುವಾಗ, 1984 ರಲ್ಲಿ ಅಲ್ಲಿಗೆ ಭೈರಪ್ಪನವರು ಬಂದಿದ್ದರು. ಅವರು ಕಿಕ್ಕಿರಿದ ಸಭೆಯಲ್ಲಿ ಮಾತಾಡಿದ ನಂತರ, ಪ್ರಶ್ನೋತ್ತರ ನಡೆಯಿತು . ಆಮೇಲೆ ನಾನು ಹೋಗಿ ಮಾತಾಡಿಸಿದೆ, ಅವರಿಗೆ ನೆನಪಾಗಲಿಲ್ಲ ಎಂದು ನನಗೆ ಅನಿಸಿತು. ಆಮೇಲೆ ನನಗೆ ಅವರ ಸಂಪರ್ಕವಿರಲಿಲ್ಲ

ನಾನು ಅವರ ಶಿಷ್ಯನಾಗಿದ್ದ ಕಾಲದಲ್ಲಿ, ನನ್ನ ತಾರುಣ್ಯದಲ್ಲಿ, ನನ್ನ ವ್ಯಕ್ತಿತ್ವ ರೂಪುಗೊಳ್ಳುವ ಕಾಲದಲ್ಲಿ, ನನಗೆ ತುಂಬಾ ಸಹಾಯ ಮಾಡಿದ್ದಾರೆ. ನನ್ನ ವಿದ್ಯಾಗುರುಗಳಾದ ಅವರಿಗೆ ನಾನು ಎಂದಿಗೂ ಕೃತಜ್ಞ.

ತುಂಬು ಜೀವನದ ನಂತರ ನಮ್ಮನ್ನು ಅಗಲಿದ್ದಾರೆ. ಭಾವ ಪೂರ್ಣ ಶ್ರದ್ಧಾಂಜಲಿ.

ಲೇಖಕರು: ಎಮ್

ವಿಜಯ ಕುಮಾರ್

‌,

ಪಿ ಹೆಚ್

ಡಿ ( ಏರೋಸ್ಪೇಸ್

ಇಂಜಿನಿಯರಿಂಗ್)

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande